ಸರಕಾರಿ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಅಗತ್ಯ: ದೇಶದ ಮೊದಲ ತೃತೀಯಲಿಂಗಿ ನ್ಯಾಯಾಧೀಶೆ ಜೋಯಿಟಾ ಮೊಂಡಲ್
ಇಂದೋರ್, ಡಿ.17: ತೃತೀಯ ಲಿಂಗಿಗಳಿಗೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿಯನ್ನು ನೀಡುವ ಅಗತ್ಯವಿದೆಯೆಂದು ಭಾರತದ ಪ್ರಪ್ರಥಮ ತೃತೀಯ ಲಿಂಗಿ ನ್ಯಾಯಾಧೀಶೆ ಜೊಯಿತಾ ಮೊಂಡಲ್ ಹೇಳಿದ್ದಾರೆ. ಪೊಲೀಸ್ ಪಡೆ ಹಾಗೂ ರೈಲ್ವೆಯಂತಹ ವಲಯಗಳಲ್ಲಿ ತೃತೀಯಲಿಂಗಿಗಳ ನೇಮಕವು, ಅವರ ಬಗ್ಗೆ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಹಾಗೂ ಜೀವನದಲ್ಲಿ ಪ್ರಗತಿ ಸಾಧಿಸಲು ಅವರಿಗೆ ನೆರವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮದ್ಯಪ್ರದೇಶದ ಇಂದೋರ್ ನಲ್ಲಿ ಶನಿವಾರ ನಡೆದ ಸಂಸ್ಕೃತಿ ಹಾಗೂ ಸಾಹಿತ್ಯ ಉತ್ಸವ ‘ಲಿಟ್ಚೌಕ್’ನಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿ ತೃತೀಯ ಲಿಂಗಿಗಳಿಗೆ ಸಮರ್ಪಕ ಸಂಖ್ಯೆಯ ಆಶ್ರಯಧಾಮಗಳನ್ನು ನಿರ್ಮಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರಕಾರವು ಯೋಜನೆಯೊಂದನ್ನು ಆರಂಭಿಸಬೇಕಾಗಿದೆ ಎಂದರು.
‘‘ತೃತೀಯ ಲಿಂಗಿ ಸಮುದಾಯಕ್ಕೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡುವುದು ಅತ್ಯವಶ್ಯವಾಗಿದೆ. ಒಂದು ವೇಳೆ ನನಗೆ ಉದ್ಯೋಗವೇ ಇಲ್ಲದಿದ್ದಲ್ಲಿ, ಯಾರು ನನಗೆ ಊಟ ಹಾಕುತ್ತಾರೆ ’’ ಎಂದವರು ಪ್ರಶ್ನಿಸಿದರು.
ಮೀಸಲಾತಿಯ ಸೌಲಭ್ಯ ದೊರೆತಲ್ಲಿ ತೃತೀಯ ಲಿಂಗಿಗಳು ಪೊಲೀಸ್ ಹಾಗೂ ರೈಲ್ವೆ ಇಲಾಖೆಗೆ ಸೇರ್ಪಡೆಗೊಳ್ಳಬಹುದಾಗಿದೆ. ಇದರಿಂದಾಗಿ ತೃತೀಯಲಿಂಗಿ ಸಮುದಾಯಕ್ಕೆ ಜೀವನದಲ್ಲಿ ಮುನ್ನಡೆ ಸಾಧಿಸಲು ನೆರವಾಗಲಿದೆ ಮಾತ್ರವಲ್ಲದೆ, ಅವರ ಬಗ್ಗೆ ಸಮಾಜದಲ್ಲಿ ಇರುವ ದೃಷ್ಟಿಕೋನ ಕೂಡಾ ಬದಲಾಗಲಿದೆಯೆಂದು ಜೋಯಿಟಾ ಮೊಂಡಲ್ ತಿಳಿಸಿದ್ದಾರೆ.
ಸರಕಾರಿ ಇಲಾಖೆಗಳು ತೃತೀಯ ಲಿಂಗಿಗಳು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚು ಸಂವೇದನೆಯಿಂದ ವರ್ತಿಸಬೇಕು ಜೋಯಿಟಾ ಹೇಳಿದ್ದಾರೆ.
2017ರಲ್ಲಿ ಪಶ್ಚಿಮ ಬಂಗಾಳದ ಇಸ್ಲಾಂಪುರದ ಲೋಕ್ ಆದಾಲತ್ ನಲ್ಲಿ ಜೋಯಿಟಾ ಮೊಂಡಲ್ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ, ದೇಶದಲ್ಲಿ ಈ ಹುದ್ದೆಯನ್ನು ಆಲಂಕರಿಸಿದ ಪ್ರಪ್ರಥಮ ತೃತೀಯ ಲಿಂಗಿಯಾಗಿದ್ದಾರೆ.
2019ರಲ್ಲಿ ತೃತೀಯಲಿಂಗಿಗಳ ಹೋರಾಟಗಾರ್ತಿ ವಿದ್ಯಾ ಕಾಂಬ್ಳೆ ಅವರು ಮಹಾರಾಷ್ಟ್ರದ ನಾಗಪುರದ ಲೋಕ ಆದಾಲತ್ ನಲ್ಲಿ ನ್ಯಾಯಾಧೀಶ ಸದಸ್ಯರಾಗಿ ನೇಮಕಗೊಂಡರು. ಆ ವರ್ಷವೇ ಇನ್ನೋರ್ವ ತೃತೀಯ ಲಿಂಗಿ, ಅಸ್ಸಾಂನ ಗುವಾಹಟಿಯವರಾದ ಸ್ವಾತಿ ಬಿಧಾನ್ ಬರುಹಾ ನ್ಯಾಯಾಧೀಶರಾಗಿ ನೇಮಕಗೊಂಡರು.