ಸಂವಿಧಾನದ ಮೇಲೆ ಗೌರವವಿಲ್ಲದಿದ್ದರೆ ರಾಜಕಾರಣಿಯಾಗಲು ಅರ್ಹರಲ್ಲ, ವಿರೋಧಿಗಳು ದೇಶಭಕ್ತರೆನಿಸಲಾರರು: ಸಿದ್ದರಾಮಯ್ಯ
‘ವಸಂತ ವಿನ್ಯಾಸ’ ಪುಸ್ತಕ ಬಿಡುಗಡೆ

ಬೆಳ್ತಂಗಡಿ: ‘ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಧರ್ಮಶಾಸ್ತ್ರವಿದ್ದಂತೆ. ಸಂವಿಧಾನದ ಮೇಲೆ ಗೌರವವಿಲ್ಲದಿದ್ದರೆ ರಾಜಕಾರಣಿಯಾಗಲು ಅರ್ಹರಲ್ಲ. ಸಂವಿಧಾನ ವಿರೋಧಿಗಳು ದೇಶಭಕ್ತರೆನಿಸಲಾರರು’ ಎಂದು ಮಾಜಿ ಸಿಎಂ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜೈ ಪ್ರಕಾಶನ ಸಂಸ್ಥೆ ಹೊರತಂದ ಲೇಖಕ ಅರವಿಂದ ಚೊಕ್ಕಾಡಿ ಬರೆದ ಮಾಜಿ ಶಾಸಕ ಕೆ. ವಸಂತ ಬಂಗೇರರ ವ್ಯಕ್ತಿತ್ವ ಚಿತ್ರಣದ ‘ವಸಂತ ವಿನ್ಯಾಸ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
‘ರಾಜಕೀಯ ವ್ಯಕ್ತಿಗಳು ಜಾತಿ ಧರ್ಮ ಮೀರಿದ ವ್ಯಕ್ತಿತ್ವ ಹೊಂದಿರಬೇಕು. ಸಂವಿಧಾನದ ಆಧಾರದಲ್ಲಿ ಆಯ್ಕೆಯಾಗುವ ಅವರಿಗೆ ಎಲ್ಲರೂ ಸಮಾನರು. ನಮ್ಮ ಧರ್ಮದ ಬಗ್ಗೆ ನಿಷ್ಠೆ ಇರಬೇಕು. ಆದರೆ ಇನ್ನೊಂದು ಧರ್ಮವನ್ನು ವಿರೋಧಿಸಕೂಡದು’ ಎಂದರು.
‘ಕೆ. ವಸಂತ ಬಂಗೇರರು 5 ಬಾರಿ ಶಾಸಕರಾದರೂ ತನ್ನ ಸ್ವಾರ್ಥಕ್ಕಾಗಿ ಏನೂ ಕೇಳಿದವರಲ್ಲ. ಅವರು ಜನಪರವಾದ ಕೆಲಸಕ್ಕಾಗಿ ಸರ್ಕಾರದ ಮುಂದೆ ಬರುತ್ತಿದ್ದರು. ಜಾತಿ ಧರ್ಮ ಮೀರಿ ಜನರ ಸೇವೆಯನ್ನೇ ತನ್ನ ರಾಜಕಾರಣದ ಭಾಗ ಎಂದು ಭಾವಿಸಿಕೊಂಡು ದುಡಿಯುತ್ತಿದ್ದ ಅಪರೂಪದ ರಾಜಕಾರಣಿ ಅವರು’ ಎಂದು ಸಿದ್ದರಾಮಯ್ಯ ಹೇಳಿದರು.
ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಪುಸ್ತಕದ ಪರಿಚಯ ಮಾಡಿ ಮಾತನಾಡಿ, ‘ ಕೆ. ವಸಂತ ಬಂಗೇರರು ಆಸ್ತಿವಂತರಾಗಿದ್ದವರು ಜನಸೇವೆಯ ತುಡಿತದಿಂದ ಇದ್ದದ್ದೆಲ್ಲ ಕಳೆದುಕೊಂಡಿದ್ದಾರೆ. ಜನ ಸೇವೆಯ ಕಾಯಕವನ್ನು ತನ್ನ ಬದುಕಿನ ಧರ್ಮವೆಂದು ಭಾವಿಸಿಕೊಂಡು ಅದರಂತೆ ನಡೆಯುತ್ತಿರುವ ಸಜ್ಜನ ರಾಜಕಾರಣಿಯಾಗಿದ್ದಾರೆ. ಅವರೊಳಗಿನ ಸಿಟ್ಟು ಕ್ಷಣಿಕವಾದುದು. ಆದರೆ ಅಂತಃಕರಣದೊಳಗಿನ ಮನಸ್ಸು ವಿಶೇಷವಾದುದು’ ಎಂದರು.
ಕೆ. ವಸಂತ ಬಂಗೇರ ಮಾತನಾಡಿ, ‘ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಬಂದ ಸಂದರ್ಭ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ತಾಲ್ಲೂಕಿಗೆ ಕರೆಸಿಕೊಂಡು ಅವರಿಗೆ ಕಾಯಿಲೆಯ ಪರಿಚಯ ಮಾಡಿಸಿ ಪರಿಹಾರ ತರಿಸಿಕೊಂಡಿದ್ದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಸುಮಾರು 2000 ಕೋಟಿಗಿಂತ ಅಧಿಕ ಅನುದಾನ ತಾಲ್ಲೂಕಿಗೆ ನೀಡಿದ್ದರು. ಆದರೆ ಇಂದು ಅದೆಲ್ಲವನ್ನು ನಾನು ತಾಲ್ಲೂಕಿಗೆ ತಂದುಕೊಂಡ ಅನುದಾನ ಎಂದು ಈಗಿನ ಶಾಸಕರು ಮಾಧ್ಯಮದ ಮುಂದೆ ಹೇಳಿಕೊಳ್ಳುತ್ತಿದ್ದಾರೆ’ ಎಂದರು.
ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ರಾಜೇಶ್ವರಿ ಚೇತನ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಕೆ.ವಸಂತ ಬಂಗೇರರ ಪತ್ನಿ ಸುಜಿತಾ ವಿ ಬಂಗೇರ ಇದ್ದರು.
ಲೇಖಕ ಅರವಿಂದ ಚೊಕ್ಕಾಡಿ ದಂಪತಿಯನ್ನು, ಕೆ. ವಸಂತ ಬಂಗೇರ ದಂಪತಿಯನ್ನು ಗೌರವಿಸಲಾಯಿತು. ಶ್ರೀ ಗುರುದೇವ ಕಾಲೇಜಿನಲ್ಲಿ ಕರಾಟೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪದ್ಮನಾಭ ಮಾಣಿಂಜ ಸ್ವಾಗತಿಸಿದರು. ಅರವಿಂದ ಚೊಕ್ಕಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೆ. ವಸಂತ ಬಂಗೇರ ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ. ಅವರ ವ್ಯಕ್ತಿತ್ವ ಇಡೀ ಸಮಾಜಕ್ಕೆ ಅನಾವರಣವಾಗಬೇಕು. ನಾನು, ಯಡಿಯೂರಪ್ಪ ಮತ್ತು ವಸಂತ ಬಂಗೇರ ಏಕಕಾಲಕ್ಕೆ ವಿಧಾನ ಸಭೆಗೆ ಪ್ರವೇಶ ಮಾಡಿದವರು. ಬಂಗೇರರಲ್ಲಿ ಸಿಟ್ಟು, ಅನುಕಂಪ, ಕರುಣೆ ಎಲ್ಲವೂ ಇದೆ. 5 ಬಾರಿ ಶಾಸಕರಾದ ಅವರು ಮಂತ್ರಿಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದರು ಎಂದ ಸಿದ್ದರಾಮಯ್ಯ ಮನಸ್ಸು ಮತ್ತು ಆರೋಗ್ಯ ಚೆನ್ನಾಗಿದ್ದರೆ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಚಿಂತನೆ ಮಾಡಿ ವಸಂತ ಬಂಗೇರರಿಗೆ ಸೂಚಿಸಿದರು.