ಕೋಮುವಾದಿ ಬಿಜೆಪಿಯನ್ನು ಸೋಲಿಸದಿದ್ದರೆ ದೇಶಕ್ಕೆ ಅಪಾಯ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಳ್ತಂಗಡಿಯಲ್ಲಿ ಕಬ್ಬಡಿ ಪಂದ್ಯಾಟ ಉದ್ಘಾಟನೆ

ಬೆಳ್ತಂಗಡಿ: ಸಂವಿಧಾನವನ್ನು ಗೌರವಿಸದವರು, ಜಾತಿಯ ವಿಷಬೀಜ ಬಿತ್ತುವವರು ಅಧಿಕಾರ ನಡೆಸಲು ಅರ್ಹರಲ್ಲ. ಭಾರತ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಲ್ಲ. ಇದು ಜಾತ್ಯಾತೀತ ರಾಷ್ಟ್ರ, ನಾವೆಲ್ಲ ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲಿ ಬರಬೇಕು. ಆದರೆ ಕೋಮುವಾದಿ ಬಿಜೆಪಿ ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುತ್ತಿದ್ದು ಇದನ್ನು ಮುಂದಿನ ಚುಣಾವಣೆಯಲ್ಲಿ ಸೋಲಿಸಬೇಕು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಶನಿವಾರ ಲಾಯಿಲ ಪ್ರಸನ್ನ ಕಾಲೇಜಿನ ಆವರಣದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗ್ರಾಮೀಣ ಮತ್ತು ನಗರ ಸಮಿತಿ ವತಿಯಿಂದ ನಡೆದ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಬೂತ್ ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಮತ್ತು ಮಹಿಳಾ ಕಾರ್ಯಕರ್ತರ ಮುಕ್ತ ಹಗ್ಗಜಗ್ಗಾಟ ಪಂದ್ಯಾಟವನ್ಬು ಉದ್ಘಾಟಿಸಿ ಮಾತನಾಡಿದರು.
ನಾನು ಹಿಂದೂ ಧರ್ಮವನ್ನು ಅನುಸರಿಸುತ್ತೇನೆ ಆದರೆ ಯಾವ ಧರ್ಮವನ್ನೂ ದ್ವೇಷಿಸುವುದಿಲ್ಲ ಅದೇ ಸಿಟಿ ರವಿಗೆ ತನಗೂ ಇರುವ ವ್ಯತ್ಯಾಸ ಎಂದ ಅವರು, ದೇಶದಲ್ಲಿ ಪ್ರಜಾತಂತ್ರ ಉಳಿದು ದೇಶದ ಸಂವಿಧಾನ ರಕ್ಷಣೆ ಆಗಬೇಕಾದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕಾದುದು ಅನಿವಾರ್ಯವಾಗಿದೆ. ಬಿಜೆಪಿಯವರು ಮನುಸ್ಮೃತಿ ಜಾತಿ ವ್ಯವಸ್ಥೆ ಮತ್ತು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯುವಕರು ಇದನ್ನು ತಿಳಿದುಕೊಂಡು ಜಾತಿ ಧರ್ಮದ ಅಫೀಮ್ ನಿಂದ ಹೊರಬರಬೇಕು ಎಂದರು.
ಮಾಜಿ ಸಚಿವ ಪ್ರಸನ್ನ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗಂಗಾದರ ಗೌಡ ಪ್ರಾಸ್ತಾವಿಕ ಮಾತನಾಡಿ, ಜನರ ನಡುವೆ ಜಾತೀಯ, ಧರ್ಮದ ಕಂದಕ ನಿರ್ಮಿಸುವ ಕಾರ್ಯ ಬಿಜೆಪಿ ಪಕ್ಷದಿಂದ ಆಗುತ್ತಿದ್ದು ಇದರಿಂದ ಜನ ಹತಾಶರಾಗಿದ್ದಾರೆ. ಇದರಿಂದ ಮುಕ್ತಿ ಹೊಂದಲು ಜನರ ಮಧ್ಯೆ ಬಾಂಧವ್ಯ ಹೆಚ್ಚಲು ಕಬಡ್ಡಿ, ಹಗ್ಗಜಗ್ಗಾಟ ಪಂದ್ಯಾಟ ಅಯೋಜಿಸಲಾಗಿದೆ. ಮುಂದೆ ಇದು ಕಾಂಗ್ರೆಸ್ ಪಕ್ಷದ ಬೆಳವಣಿಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ಮಾಜಿ ಸಚಿವ, ಶಾಸಕ ಯುಟಿ ಖಾದರ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರುಗಳಾದ ಕೆ ವಸಂತ ಬಂಗೇರ, ಜೆ ಅರ್ ಲೋಬೋ, ಮೊಯ್ದಿನ್ ಬಾವ, ಐವನ್ ಡಿಸೋಜ, ಶಕುಂತಲಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಅಧ್ಯಕ್ಷ ರಂಜನ್ ಗೌಡ, ಬೆಳ್ತಂಗಡಿ ತಾಲೂಕು ಉಸ್ತುವಾರಿ ಟಿ ಎಂ ಶೈಹಿದ್ ತೆಕ್ಕಿಲ್, ಕೆ ಪಿ ಸಿ ಸಿ ಸದಸ್ಯ ರಾಜಶೇಖರ ಅಜ್ರಿ ಮುಂತಾದವರು ಉಪಸ್ಥಿತರಿದ್ದರು.
ಕೆ ಪಿ ಸಿ ಸಿ ಸದಸ್ಯ ಕೇಶವ ಗೌಡ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.







.jpeg)

