ಪ್ರಾಧ್ಯಾಪಕರು-ಉಪನ್ಯಾಸಕರ ಮಧ್ಯಂತರ ವರ್ಗಾವಣೆ ಸ್ಥಗಿತಗೊಳಿಸಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಡಿ.17: ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರ ಮಧ್ಯಂತರ ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರ ವರ್ಗಾವಣೆಯನ್ನು ಮಧ್ಯಂತರ ಅವಧಿಯ ಡಿಸೆಂಬರ್ ತಿಂಗಳಲ್ಲಿ ನಡೆಸಲು ಆಯುಕ್ತಾಲಯ ಪ್ರಕಟಣೆಯನ್ನು ಹೊರಡಿಸಿದೆ. ಸರಕಾರವು ವರ್ಗಾವಣೆಗಳಿಗೆ ತೋರಿಸುತ್ತಿರುವ ಆಸಕ್ತಿ, ಅಭಿವೃದ್ಧಿ ವಿಷಯಗಳಿಗೆ ಹಾಗೂ ನೇಮಕಾತಿಗಳಿಗೆ ತೋರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ವರ್ಗಾವಣೆ ಆಗಿ 6 ತಿಂಗಳು ಮಾತ್ರ ಆಗಿದೆ. ಮತ್ತೆ ಈಗ ಎರಡನೆ ಬಾರಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಯಾವುದಾದರೊಂದು ಇಲಾಖೆ ಒಂದೇ ವರ್ಷದಲ್ಲಿ ಎರಡು, ಮೂರು ಬಾರಿ ವರ್ಗಾವಣೆ ಮಾಡಿರುವ ಉದಾಹರಣೆಗಳಿವೆಯೇ? ಉನ್ನತ ಶಿಕ್ಷಣ ಇಲಾಖೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುತ್ತೇನೆಂದು ಹೇಳಿ ವರ್ಷದಲ್ಲಿ ಎರಡು, ಮೂರು ಬಾರಿ ಅಧಿಸೂಚನೆ ಹೊರಡಿಸಿಕೊಂಡು ಕೂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್.ಇ.ಪಿ. ಎಂಬುದು ಕೇವಲ ಹೆಸರಿಗೆ ಮಾತ್ರ ಘೋಷಣೆಯಾಗಿದೆ. ಸರಿಯಾಗಿ ಪಠ್ಯ ಪುಸ್ತಕಗಳನ್ನು, ರೆಫರೆನ್ಸ್ ಪುಸ್ತಕಗಳನ್ನು ಒದಗಿಸಲಾಗುತ್ತಿಲ್ಲ, ಲೈಬ್ರರಿಗಳಲ್ಲೂ ಹಳೆಯ ಪುಸ್ತಕಗಳೇ ಇವೆ. ವಿಶ್ವವಿದ್ಯಾನಿಲಯಗಳಲ್ಲೂ ಈ ಕುರಿತು ಗೊಂದಲ ಉಂಟಾಗಿ 8 ತಿಂಗಳಾದರೂ ಕೆಲವು ಸೆಮಿಸ್ಟರ್‍ಗಳ ಫಲಿತಾಂಶವೆ ಪ್ರಕಟವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಮಧ್ಯಂತರ ಅವಧಿಯ ವರ್ಗಾವಣೆ ಮಾಡುವುದರಿಂದ ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಎನ್‍ಇಪಿ ಹೆಸರಲ್ಲಿ ಹಲವಾರು ತಂತ್ರಾಂಶಗಳನ್ನು, ಆಪ್‍ಗಳನ್ನು ಮಾಡುವುದಾಗಿ ಹೇಳಿ ಅದರಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿರುವ ಕುರಿತು ದೂರುಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಆನ್‍ಲೈನ್ ಕಲಿಕೆಗೆಂದು ಕರ್ನಾಟಕ ಎಲ್‍ಎಂಎಸ್ ಎಂಬ ಆಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಪರಿಣಿತರಿಂದ ಸಿದ್ಧಪಡಿಸಿ ಉತ್ತಮ ಗುಣ ಮಟ್ಟದ ಬೋಧನೆಯನ್ನು ಅಳವಡಿಸುವ ಬದಲು, ಈಗ ಇರುವ ಬೋಧಕರಿಂದಲೆ ಮೊಬೈಲ್ ಮೂಲಕವೆ ಸಿದ್ಧಪಡಿಸಿ ಅದರಲ್ಲಿ ತುಂಬಿಸಲಾಗಿದೆ. ಬೆಳಕು, ಧ್ವನಿ ಮುಂತಾದವುಗಳು ಅತ್ಯಂತ ಕಳಪೆಯಾಗಿ ವಿದ್ಯಾರ್ಥಿಗಳು ಆ ಆನ್‍ಲೈನ್ ಬೋಧನೆಯ ಕಡೆಗೆ ತಿರುಗಿಯೂ ನೋಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಲ್‍ಎಂಎಸ್ ಆಪ್‍ಗೆಂದು ಎಷ್ಟು ಹಣ ವಿನಿಯೋಗಿಸಲಾಗುತ್ತಿದೆ ಎಂದ ಸರಕಾರ ಸ್ಪಷ್ಟಪಡಿಸಬೇಕು. ಉನ್ನತ ಶಿಕ್ಷಣ ಇಲಾಖೆಯು ಅನೇಕ ಅರಾಜಕ ವ್ಯವಸ್ಥೆಗಳನ್ನು ಸೃಷ್ಟಿಸುವುದರ ಜೊತೆಗೆ ವರ್ಗಾವಣೆಯನ್ನು ಚಟ ಮಾಡಿಕೊಂಡಿದೆ. ಆದುದರಿಂದ, ವರ್ಗಾವಣೆ ಮಾಡಲು ನೀಡಿರುವ ಪ್ರಕಟಣೆಯನ್ನು ಹಿಂಪಡೆದು, ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನಿಗಧಿತ ಅವಧಿಯಲ್ಲಿ ವರ್ಗಾವಣೆ ಮಾಡುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.







