ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯ
![ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯ](/images/placeholder.jpg)
ಬೆಂಗಳೂರು, ಡಿ.17: ಮಂಡ್ಯದ ಕಟ್ಟೇರಿ ಗ್ರಾಮದ ವಿದ್ಯಾರ್ಥಿ ನಿಲಯದಲ್ಲಿ ಮೇಲ್ವಿಚಾರಕ ಚಿನ್ಮಯಾನಂದ ಮೂರ್ತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣದ ವಿಚಾರಣೆಯನ್ನು ವೇಗಗೊಳಿಸಿ ಆರೋಪಿಗೆ ಶಿಕ್ಷೆಯಾಗುವಂತೆ ಖಾತ್ರಿಪಡಿಸಬೇಕು ಎಂದು ಅತ್ಯಾಚಾರ ವಿರೋಧಿ ಆಂದೋಲನವು ಆಗ್ರಹಿಸಿದೆ.
ಶನಿವಾರ ಈ ಕುರಿತು ಪ್ರಕಟನೆ ಹೊರಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಮೇಲಾಧಿಕಾರಿಗಳಿಗೆ ದೂರು ಬಂದಾಗ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ವತಂತ್ರ ತನಿಖೆ ನಡೆಸಿ, ಅದು ಸತ್ಯವಾದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಸಂತ್ರಸ್ತರಿಗೆ ಎಲ್ಲ ಬಗೆಯ ನೆರವನ್ನೂ ಒಂದೇ ಛಾವಣಿಯಡಿ ಒದಗಿಸುವ ‘ಏಕಗವಾಕ್ಷಿ’ ಕೇಂದ್ರವನ್ನು ಆರಂಭಿಸಬೇಕು ಮತ್ತು ವ್ಯವಸ್ಥಿತವಾಗಿ ನಡೆಯುವುದನ್ನು ಖಾತ್ರಿಪಡಿಸಬೇಕು. ಪುಟ್ಟ ಮಕ್ಕಳ ಅತ್ಯಾಚಾರ ಮತ್ತು ಕೊಲೆಯಂತಹ ಘೋರವಾದ ಪ್ರಕರಣಗಳು ಮುಂದಕ್ಕೆ ನಡೆಯುವುದನ್ನು ನಿಯಂತ್ರಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ನೀಡುವ ಹೋರ್ಡಿಂಗ್ಗಳನ್ನು ಅಳವಡಿಸುವುದು, ಪೋಸ್ಟರ್ ಗಳನ್ನು ಅಂಟಿಸುವುದು, ಮಾಧ್ಯಮಗಳ ಮೂಲಕ ಅರಿವು ಮೂಡಿಸುವುದು ಮತ್ತು ಶಾಲಾ-ಕಾಲೇಜುಗಳಲ್ಲಿ, ಹಾಸ್ಟೆಲ್ಗಳಲ್ಲಿ ಮುಂತಾದೆಡೆ ಜಾಗೃತಿ ಮೂಡಿಸುವುದನ್ನು ನಿರಂತರವಾಗಿ ನಡೆಸಬೇಕು ಎಂದು ತಿಳಿಸಿದೆ.
ವಿಕೃತ ಲೈಂಗಿಕತೆಯನ್ನು ಬಿಂಬಿಸುತ್ತಾ ಹದಿವಯಸ್ಸಿನ ಗೊಂದಲದಲ್ಲಿರುವ ಮಕ್ಕಳನ್ನು ತಪ್ಪುದಾರಿಗೆಳೆಯುವ ಜಾಲತಾಣಗಳನ್ನೂ, ಸಿನೆಮಾಗಳನ್ನೂ, ಜಾಹೀರಾತುಗಳನ್ನೂ ನಿರ್ಬಂಧಿಸಬೇಕು. ಅತ್ಯಾಚಾರದ ಘಟನೆಗಳು ನಡೆದ ಸಂದರ್ಭಗಳಲ್ಲಿ ತಮ್ಮ ಕರ್ತವ್ಯ ನಿಭಾಯಿಸುವುದನ್ನು ಬಿಟ್ಟು ಅಸಂಬದ್ಧವಾದ, ಉನ್ಮಾದವನ್ನು ತುಂಬುವ ಒಂದು ಸಮುದಾಯವನ್ನು ಗುರಿಮಾಡುವಂತಹ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೇಲೆ ಕ್ರಿಮಿನಲ್ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದೆ.