ʼಎಲ್ಲರಿಗೂ ಒಂದೇ ಅಳತೆ ಎಂಬ ಧೋರಣೆ ಸರಿಯಲ್ಲʼ: ಜೈವಿಕ ವೈವಿಧ್ಯತೆ ಸಮಾವೇಶದಲ್ಲಿ ಭಾರತ ಹೇಳಿಕೆ

ಮಾಂಟ್ರಿಯಲ್: ವಿಶ್ವವು ಜಾಗತಿಕ ಜೀವವೈವಿಧ್ಯ ಚೌಕಟ್ಟಿನೆಡೆ ಸಾಗುತ್ತಿರುವಾಗ ‘ಎಲ್ಲರಿಗೂ ಒಂದೇ ಅಳತೆ ಸರಿಹೊಂದುತ್ತದೆ’ ಎಂಬ ಅಭಿವೃದ್ಧಿ ಹೊಂದಿದ ದೇಶಗಳ ಧೋರಣೆ ಖಂಡಿತಾ ಸ್ವೀಕಾರಾರ್ಹವಲ್ಲ ಎಂದು ಭಾರತ ಒತ್ತಿಹೇಳಿದೆ.
ಕೆನಡಾದ ಮಾಂಟ್ರಿಯಲ್ ನಲ್ಲಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಜೈವಿಕ ವೈವಿಧ್ಯತೆಯ ಸಮಾವೇಶದಲ್ಲಿ ಮಾತನಾಡಿದ ಭಾರತದ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆ ಸಚಿವ ಭೂಪೇಂದ್ರ ಯಾದವ್ ‘ದುರ್ಬಲ ವರ್ಗದವರಿಗೆ ಅಗತ್ಯವಾದ ಬೆಂಬಲವನ್ನು ಸಬ್ಸಿಡಿ ಎಂದು ಕರೆಯಲಾಗುವುದಿಲ್ಲ ಮತ್ತು ಇದನ್ನು ರದ್ದುಪಡಿಸಲಾಗದು. ಕೀಟನಾಶಕಗಳ ಕಡಿತಕ್ಕೆ ಸಂಖ್ಯಾತ್ಮಕ ಜಾಗತಿಕ ಗುರಿಯು ಅನಗತ್ಯವಾಗಿದೆ ಮತ್ತು ಅದನ್ನು ನಿರ್ಧರಿಸಲು ದೇಶಗಳಿಗೆ ಬಿಡಬೇಕು’ ಎಂದು ಹೇಳಿದರು.
ಜಾಗತಿಕ ಜೀವ ವೈವಿಧ್ಯ ಚೌಕಟ್ಟನ್ನು ವೈಜ್ಞಾನಿಕವಾಗಿ ಮತ್ತು ಸಮಾನತೆಯ ಬೆಳಕಿನಲ್ಲಿ ರೂಪಿಸಬೇಕು ಮತ್ತು ಜೀವವೈವಿಧ್ಯತೆಯ ಸಮಾವೇಶದಲ್ಲಿ ಒದಗಿಸಿದಂತೆ ತಮ್ಮ ಸಂಪನ್ಮೂಲಗಳ ಮೇಲೆ ರಾಷ್ಟ್ರಗಳ ಸಾರ್ವಭೌಮ ಹಕ್ಕನ್ನು ರೂಪಿಸಬೇಕು. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಐತಿಹಾಸಿಕ, ಅಸಮಾನ ಹೊರಸೂಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಜವಾಬ್ದಾರಿಗೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಯಾದವ್ ಪ್ರತಿಪಾದಿಸಿದರು.
ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳ ನಡುವಿನ ಭಿನ್ನಾಭಿಪ್ರಾಯಗಳು 22 ಗುರಿಗಳನ್ನು ಹೊಂದಿರುವ ಜೈವಿಕ ವೈವಿಧ್ಯತೆಯ ಚೌಕಟ್ಟಿನ ಕರಡು ನಿರ್ಣಯ ಅಂಗೀಕಾರದ ಬಗೆಗಿನ ಚರ್ಚೆಗೆ ಅಡ್ಡಿಯಾಗಿದೆ. ಮಹಾತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಬೇಕಿದ್ದರೆ ಅನುದಾನದ ಹೊಂದಾಣಿಕೆಯ ವಿಧಾನಗಳನ್ನು ರೂಪಿಸಬೇಕು ಎಂದು ಭಾರತ ಆಗ್ರಹಿಸಿದೆ. ಜೈವಿಕ ವೈವಿಧ್ಯತೆ ಸಮಾವೇಶದ ಸೆಕ್ಷನ್ 20 ಮತ್ತು 21ರಡಿ ನೂತನ ಕಾರ್ಯವಿಧಾನವನ್ನು ಭಾರತ ಬೆಂಬಲಿಸಿದೆ.
ʼ2030ರೊಳಗೆ 30% ಭೂಮಿ ಮತ್ತು 30% ಸಾಗರವನ್ನು ರಕ್ಷಿಸಬೇಕೆಂದು ಆತಿಥೇಯ ಕೆನಡಾ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳು ಬಯಸುತ್ತಿವೆ. ಈ ಗುರಿಸಾಧನೆಗೆ ಇತರ ದೇಶಗಳನ್ನು ಒತ್ತಾಯಿಸುವುದನ್ನು ನಾವು ಮುಂದುವರಿಸಲಿದ್ದೇವೆ. ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಸಬ್ಸಿಡಿಗಳನ್ನು ತೆಗೆದು ಹಾಕುವ ಪ್ರಸ್ತಾಪವನ್ನು ಭಾರತ ವಿರೋಧಿಸುತ್ತದೆ’ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.