ಮಂಗಳೂರು : ಯುನಿವೆಫ್- ಶಿಕ್ಷಕರೊಂದಿಗೆ ವಿಚಾರ ವಿನಿಮಯ

ಮಂಗಳೂರು : ಯುನಿವೆಫ್ ಎಜುಕೇಶನ್ ಫೋರಮ್ ಇದರ ವತಿಯಿಂದ "ಮಾನವ ಸಮಾಜ, ಸಂಸ್ಕೃತಿ ಮತ್ತು ನಮ್ಮ ನಿಲುವು" ಎಂಬ ವಿಷಯದಲ್ಲಿ "ಶಿಕ್ಷಕರೊಂದಿಗೆ ವಿಚಾರ ವಿನಿಮಯ" ಕಾರ್ಯಕ್ರಮ ಬಲ್ಮಠ ಮಿಶನ್ ಕಂಪೌಂಡ್ ನಲ್ಲಿರುವ ಸಹೋದಯ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅಶೋಕನಗರದ ಎಸ್. ಸಿ. ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ। ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ್ ರವರು, "ಮನುಷ್ಯನಲ್ಲಿ ಮನುಷ್ಯನನ್ನು ಕಾಣಬೇಕಾದರೆ ಹೃದಯವಂತಿಕೆ ಇರಬೇಕು. ಪರಂಪರಾಗತ ಮೌಲ್ಯಗಳನ್ನು ಧಿಕ್ಕರಿಸಿ ಏಕಾಂಗಿಯಾದವ ವ್ಯವಸ್ಥೆಯ ಕುತಂತ್ರಕ್ಕೆ ಸುಲಭದಲ್ಲಿ ಬಲಿಯಾಗುತ್ತಾನೆ." ಎಂದು ಹೇಳಿದರು.
ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಹೈದರಾಲಿಯವರು ಮಾತನಾಡಿ "ಜಾಗತೀಕರಣವು ಸಂಸ್ಕೃತಿಯ ಕೊಡುಕೊಳ್ಳುವಿಕೆಗೆ ಹೇತುವಾದರೂ ಪಾರಂಪರಿಕ ಮೌಲ್ಯಗಳನ್ನು ಜೀವಂತವಿಟ್ಟಾಗ ಮಾತ್ರ ಸಹ್ಯ ಸಮಾಜ ನಿರ್ಮಾಣ ಸಾಧ್ಯ" ಎಂದರು.
ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಲೂಯಿಸ್ ಮನೋಜ್ ಅವರು "ವಿದ್ಯಾಲಯಗಳು ಕೇವಲ ಔಪಚಾರಿಕ ಶಿಕ್ಷಣ ಕಲಿಯಲು ಮಾತ್ರವಲ್ಲ ಬದಲಾಗಿ ಶಿಸ್ತು, ಸಂಯಮ, ಸಹಬಾಳ್ವೆಯ ಶಿಕ್ಷಣವೂ ಅಲ್ಲಿಂದಲೇ ಪ್ರಾರಂಭವಾಗುತ್ತದೆ" ಎಂದು ಹೇಳಿದರು.
ಕೋಣಾಜೆ ಪಿ.ಎ. ಇಂಜಿನಿಯರಿಂಗ್ ಕಾಲೇಜ್ ನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಮುಹಮ್ಮದ್ ಸೈಫುದ್ದೀನ್ ರವರು "ಒಳಿತು ಕೆಡುಕುಗಳ ಮಧ್ಯದ ಅಂತರ ಕ್ಷೀಣವಾದಾಗ ಸಮಾಜದಲ್ಲಿ ಕ್ಷೋಭೆ ಉಂಟಾಗುತ್ತದೆ. ನಾವು ಒಳಿತಿನ ವಾಹಕರಾಗಬೇಕು" ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ದಾರುಲ್ ಇಲ್ಮ್ ನ ಪ್ರಾಂಶುಪಾಲರಾದ ರಫೀಉದ್ದೀನ್ ಕುದ್ರೋಳಿಯವರು "ಸಮಾನತೆ ಇಲ್ಲದ ಸಮಾಜದಲ್ಲಿ ಸಾಮಾಜಿಕ ನ್ಯಾಯ ನಿರಾಕರಿಸಲ್ಪಡುತ್ತದೆ. ಇಂಥ ಸಮಾಜದಲ್ಲಿ ವಿದ್ಯಾವಂತರೂ ಕೋಮುವಾದದ ವಾಹಕರಾಗಿ ವ್ಯವಸ್ಥೆಯನ್ನು ಇನ್ನಷ್ಷು ಜಟಿಲಗೊಳಿಸುತ್ತಾರೆ" ಎಂದು ಹೇಳಿದರು.
ಸಂಚಾಲಕ ಯು .ಕೆ. ಖಾಲಿದ್ ವಿಷಯ ಮಂಡನೆ ಮಾಡಿ ಕಾರ್ಯಕ್ರಮ ಸಂಯೋಜನೆ ಮಾಡಿದರು. ಜಿಲ್ಲಾಧ್ಯಕ್ಷ ನೌಫಲ್ ಹಸನ್ ಕಿರ್ ಅತ್ ಪಠಿಸಿದರು.