ರಾಮನಗರ | ನಾಡಬಂದೂಕಿನಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು: 7 ವರ್ಷದ ಬಾಲಕ ಮೃತ್ಯು
ರಾಮನಗರ, ಡಿ.18: ಮಕ್ಕಳಿಬ್ಬರು ನಾಡಬಂದೂಕಿನಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಶಿವನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತ ಬಾಲಕನನ್ನು ಉತ್ತರ ಪ್ರದೇಶ ಮೂಲದ ಅಮಾನುಲ್ಲಾ ಮತ್ತು ಶಂಸುನಾ ದಂಪತಿಯ ಪುತ್ರ ಶಮಾ(7) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಸಹೋದರ ಸಾಜಿದ್(15) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಡಬಂದೂಕಿನ ಮಾಲಕ ಮಲ್ಲೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಮಿಕರಾಗಿರುವ ಅಮಾನುಲ್ಲಾ ಮತ್ತು ಶಂಸೂನಾ ದಂಪತಿ ಮೂರು ದಿನಗಳ ಹಿಂದೆಯಷ್ಟೇ ಮಲ್ಲೇಶ್ ಅವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದಾರೆ. ಕಳೆದ ದಿನ ದಂಪತಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಲ್ಲೇಶ್ ರ ನಾಡಬಂದೂಕು ಮಕ್ಕಳ ಕೈಗೆ ಸಿಕ್ಕಿದೆ. ಅದರಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ಬಾಲಕ ಶಮಾಗೆ ತಗುಲಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಬಂದೂಕಿಗೆ ಸಂಬಂಧಿಸಿ ಸುರಕ್ಷತಾ ನಿಯಮಗಳನ್ನು ಪಾಲಿಸದ ಆರೋಪದಲ್ಲಿ ಮಲ್ಲೇಶ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.