ನಾಳೆಯಿಂದ ವಿಧಾನಮಂಡಲ ಅಧಿವೇಶನ; ಸಮರ್ಪಕ ವ್ಯವಸ್ಥೆ ಕಲ್ಪಿಸಲು ಪರಿಷತ್ ಸಭಾಪತಿ ಮಲ್ಕಾಪುರೆ ಸೂಚನೆ
ಬೆಳಗಾವಿ, ಡಿ.18: ವಿಧಾನ ಮಂಡಲದ ಚಳಿಗಾಲ ಅಧಿವೇಶನ ಡಿ.19 ರಿಂದ ಆರಂಭಗೊಳ್ಳಲಿದ್ದು, ಪ್ರತಿವರ್ಷದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಧಾನ ಪರಿಷತ್ತಿನ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸೂಚನೆ ನೀಡಿದರು.
ರವಿವಾರ ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸಚಿವರು, ಶಾಸಕರು ಸೇರಿದಂತೆ ಯಾರಿಗೂ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ವಸತಿ ಕೊರತೆ ಕಂಡುಬಂದರೆ ಕೂಡಲೇ ವ್ಯವಸ್ಥೆ ಮಾಡಬೇಕು. ವಾಹನ ಚಾಲಕರು, ಮಾರ್ಷಲ್ ಗಳಿಗೆ ಸಮರ್ಪಕ ಊಟ ಒದಗಿಸಬೇಕು. ಆರೋಗ್ಯ ಸೌಲಭ್ಯ ಮತ್ತು ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಈಗಾಗಲೇ ಸೌಲಭ್ಯ ಒದಗಿಸಲಾಗಿದ್ದು, ವೈದ್ಯಕೀಯ ತಂಡ ಸದಾ ಲಭ್ಯವಾಗಿರುವಂತೆ ಇರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಲಾಪ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಪರಿಷತ್ತಿನ ವತಿಯಿಂದ ಪ್ರತಿವರ್ಷದಂತೆ ಪಾಸ್ ನೀಡಲಾಗುತ್ತದೆ ಎಂದು ಇದೇ ವೇಳೆ ಮಲ್ಕಾಪುರೆ ತಿಳಿಸಿದರು.
Next Story