ಪೊಲೀಸರ ಮೃದು ಧೋರಣೆಯೇ ದ.ಕ. ಜಿಲ್ಲೆಯಲ್ಲಿ ಗೂಂಡಾಗಿರಿ ಹೆಚ್ಚಳಕ್ಕೆ ಪ್ರೇರಣೆ: ಯು.ಟಿ.ಖಾದರ್ ಆರೋಪ

ಮಂಗಳೂರು, ಡಿ.18: ಮುಲ್ಕಿಯಲ್ಲಿ ಶನಿವಾರ ಯುವಕನ ಮೇಲೆ ನಡೆದ ಅನೈತಿಕ ಪೊಲೀಸ್ ಗಿರಿಯನ್ನು ಖಂಡಿಸಿರುವ ವಿಪಕ್ಷ ಉಪನಾಯಕ ಯು.ಟಿ.ಖಾದರ್, ರಾಜಕೀಯ ಪ್ರಭಾವದಿಂದಾಗಿ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಪೊಲೀಸರು ಅನುಸರಿಸುತ್ತಿರುವ ಮೃದು ಧೋರಣೆಯೇ ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅನೈತಿಕ ಗೂಂಡಾಗಿರಿಗೆ ಪ್ರೇರಣೆ ಎಂದು ಆರೋಪಿಸಿದ್ದಾರೆ.
ಅಕ್ರಮ ಚಟುವಟಿಕೆಗಳು ಅಥವಾ ತಪ್ಪು ಘಟನೆಗಳು ಸಂಭವಿಸಿದಾಗ ಕಾನೂನಿನ ಮೂಲಕ ಬಗೆಹರಿಸಬೇಕೇ ಹೊರತು ತಾವೇ ಕಾನೂನು ಕೈಗೊತ್ತುವ ಮೂಲಕ ಹಲ್ಲೆಗಳಿಗೆ ಮುಂದಾಗುವುದು ಒಳ್ಳೆಯ ನಾಗರಿಕತೆಗೆ ಶೋಭೆ ತರುವುದಿಲ್ಲ. ಜಿಲ್ಲೆಯಲ್ಲಿ ಗೂಂಡಾಗಿರಿ ಹದ್ದು ಮೀರುತ್ತಿದ್ದು, ಇದರ ಸಂಪೂರ್ಣ ವೈಫಲ್ಯವನ್ನು ಪೊಲೀಸ್ ಇಲಾಖೆ ಹೊತ್ತುಕೊಳ್ಳಬೇಕು ಎಂದು ಖಾದರ್ ಒತ್ತಾಯಿಸಿದ್ದಾರೆ.
ಇಂತಹ ಅಹಿತಕರ ಘಟನೆಗಳು ಸಂಭವಿಸಿದಾಗ ಕಾನೂನಾತ್ಮಕ ರೀತಿಯಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಬದಲು ರಾಜಕೀಯ ವ್ಯವಸ್ಥೆಯ ಒತ್ತಡಕ್ಕೆ ಮಣಿದು ಅಂಥಹ ಗೂಂಡಾ ಪ್ರವೃತ್ತಿ ಹೊಂದಿದವರ ವಿರುದ್ಧ ಮೃದು ಧೋರಣೆ ತಾಳುವುದೇ ಇದು ಮರುಕಳಿಸಲು ಪ್ರಮುಖ ಕಾರಣ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದರೆ ಪೊಲೀಸರು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಬೇಕು. ಆಗ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಅನೈತಿಕ ಪೊಲೀಸ್ ಗಿರಿ ನಡೆಸುವರ ವಿರುದ್ಧ ಜಾಮೀನುರಹಿತ ಕಠಿಣ ಕ್ರಮ ಕೈಗೊಂಡು ಜೈಲಿಗಟ್ಟುವ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿತ್ತು. ಗೃಹ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಖಾದರ್ ಆಗ್ರಹಿಸಿದ್ದಾರೆ.
ಗೂಂಡಾಗಿರಿ ಹೆಚ್ಚಳ ಕುರಿತಂತೆ ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತುಕತೆ ನಡೆಸಿದ್ದು, ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಖಾದರ್ ತಿಳಿಸಿದ್ದಾರೆ.