ನಗರ ಪ್ರದೇಶದ ಸೌಲಭ್ಯ ಗ್ರಾಮೀಣ ಪ್ರದೇಶಕ್ಕೂ ಸಿಗುವಂತಾಬೇಕು: ಯು.ಟಿ.ಖಾದರ್
ಮುಡಿಪು; ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ

ಕೊಣಾಜೆ: ಉಳ್ಳಾಲ ತಾಲೂಕಿನ ತೊಕ್ಕೊಟ್ಟುವಿನಿಂದ ಮುಡಿಪು ಪ್ರದೇಶದ ವರೆಗೆ ಹಲವು ಮೆಡಿಕಲ್ಕಾಲೇಜು,ವಿಶ್ವವಿದ್ಯಾನಿಲಯ, ಪ್ರತಿಷ್ಠಿತ ಕಂಪೆನಿಗಳು ನಿರ್ಮಾಣಗೊಂಡು ಈ ಪ್ರದೇಶವು ಇಂದು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿ ರೂಪುಗೊಂಡಿದೆ. ನಗರದಲ್ಲಿ ಸಿಗುವ ಸೌಲಭ್ಯಗಳು ಗ್ರಾಮೀಣ ಪ್ರದೇಶದಲ್ಲೂ ಸಿಗುವಂತಾಗಬೇಕಿದ್ದು, ಜನರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದು ಶಾಸಕ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ಅವರು ಶನಿವಾರ ಕೈರಂಗಳ ಗ್ರಾಮದ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರಿನ ಟ್ಯಾಂಕ್, ಕೊಳವೆ ಬಾವಿ ಮತ್ತು ಪೈಪ್ ಲೈನ್ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು.
ಮೂಲ ಸೌಲಭ್ಯಗಳು ಕೊಟ್ಟಾಗ ಇಡೀ ಊರಿನ ಅಭಿವೃದ್ಧಿಯಾಗುತ್ತದೆ. ಜನರ ಸಹಕಾರ, ಶಾಂತಿ ಸೋದರತೆಯ ಇದ್ದಲ್ಲಿ ಅಭಿವೃದ್ಧಿ ಪ್ರಕ್ರಿಯೆಗಳು ಅತ್ಯಂತ ವೇಗವಾಗಿ ನಡೆಯುತ್ತವೆ. ಶಾಂತಿ ಸಾಮರಸ್ಯವೇ ಅಭಿವೃದ್ಧಿಯ ಮಂತ್ರವಾಗಿದೆ. ಈ ಭಾಗದಲ್ಲಿ ಸುಸಜ್ಜಿತವಾದ ರಸ್ತೆಗಳು ನಿರ್ಮಾಣಗೊಂಡಿದ್ದು, ಇದೀಗ ಕುಡಿಯುವ ನೀರಿನ ಯೋಜನೆಯನ್ನೂ ಸಮರ್ಪಕವಾಗಿ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಮುಖಂಡರಾದ ನಾಸೀರ್ ನಡುಪದವು,ಅರುಣ್ ಮುಡಿಪು, ಬಶೀರ್ ಮುಡಿಪು, ಪಂಚಾಯಿತಿ ಸದಸ್ಯ ಜನಾರ್ದನ ಗಟ್ಟಿ, ಪಿಡಿಒ ವೆಂಕಟೇಶ್,ಮುಡಿಪು ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಇಬ್ರಾಹಿಂ ನಡುಪದವು, ಪಂಚಾಯಿತಿ ಸದಸ್ಯರಾದ ಶರೀಫ್ ಚೆಂಬೆತೋಟ, ಕುಂಞಿ ಮೋನು, ಆಸೀಫ್, ಅನ್ಸಾರ್ ಮೋಂಟುಗೋಳಿ, ಜನಾರ್ದನ ಕುಲಾಲ್, ಹನೀಫ್ ಮೊದಲಾದವರು ಉಪಸ್ಥಿತರಿದ್ದರು.