ಕಾವಳಕಟ್ಟೆ: ಹಿದಾಯ ಫೌಂಡೇಶನ್ ನಿಂದ ವೈದ್ಯಕೀಯ ಶಿಬಿರ

ಬಂಟ್ವಾಳ, ಡಿ.18: ಹಿದಾಯ ಫೌಂಡೇಶನ್ ಮಂಗಳೂರು ಮತ್ತು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ರವಿವಾರ ಹಿದಾಯ ಶೇರ್ ಮತ್ತು ಕೇರ್ ಕಾಲನಿ ಕಾವಳಕಟ್ಟೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿದಾಯ ಫೌಂಡೇಶನ್ ಚೇರ್‌ಮೆನ್ ಮನ್ಸೂರ್ ಅಹ್ಮದ್ ಆಝಾದ್, ನಮ್ಮ ಉದ್ಯಮ, ವ್ಯಾಪಾರ, ವಹಿವಾಟಿನ ಜೊತೆಗೆ ನಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಆದಾಯದಲ್ಲಿ ಒಂದಷ್ಟನ್ನು ಬಡವರ, ಅಶಕ್ತರ ಕಲ್ಯಾಣಕ್ಕಾಗಿ ವಿನಿಯೋಗಿಸಿದಾಗ ಸಮಾಜದಲ್ಲಿರುವ ಬಡತನವನ್ನು ನಿವಾರಿಸಬಹುದು ಎಂದು ಹೇಳಿದರು.
ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಂಡು ರೋಗ ಬರದಂತೆ ನೋಡಿಕೊಳ್ಳಬೇಕು. ನಮ್ಮಲ್ಲಿ ಯಾವುದೇ ಅನಾರೋಗ್ಯ ಕಂಡುಬಂದರೆ ಕೂಡಲೇ ವೈದ್ಯರಿಗೆ ಸಂದರ್ಶನ ಮಾಡುವ ಮೂಲಕ ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಜಿ.ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಕಾವಳಮುಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮೀ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಯೆನೆಪೊಯ ಮೆಡಿಕಲ್ ಕಾಲೇಜ್ ಅಸೋಸಿಯೇಟ್ ಪ್ರೊಫೆಸರ್ ಡಾ. ಅಶ್ವಿನಿ ಶೆಟ್ಟಿ, ಪ್ರಮುಖರಾದ ಅಬ್ದುಲ್ ಬಶೀರ್, ಅಬ್ದುಲ್ ಹಮೀದ್, ಅಬೂಸ್ವಾಲಿಹ್, ಅಬ್ದುಲ್ ಖಲೀಲ್, ನವಾಝ್, ಹಿದಾಯ ಫೌಂಡೇಶನ್ ನ ಆಬಿದ್ ಅಸ್ಗರ್, ಬಶೀರ್ ಟಿ.ಕೆ., ಆಸಿಫ್ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಜೊತೆಗೆ ಅಭಾ ಕಾರ್ಡ್ ನೋಂದಣಿ ಹಾಗೂ ಆಧಾರ್ ತಿದ್ದುಪಡಿ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಹಕೀಂ ಕಲಾಯಿ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.