ಗ್ರಾಪಂ ಜನಪ್ರತಿನಿಧಿಗಳ ಗೌರವಧನ ಮತ್ತಷ್ಟು ಹೆಚ್ಚಳಕ್ಕೆ ಹೋರಾಟ; ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ
ಮಂಗಳೂರು, ಡಿ.18: ನಿರಂತರ ಆಗ್ರಹದ ಬಳಿಕವೂ ರಾಜ್ಯ ಸರಕಾರ ಗ್ರಾಪಂ ಜನಪ್ರತಿನಿಧಿಗಳಿಗೆ ಕೇವಲ 1ರಿಂದ 2 ಸಾವಿರ ರೂ.ವರೆಗೆ ಗೌರವಧನ ಹೆಚ್ಚಿಸಿ ಆದೇಶ ಹೊರಡಿಸಿದೆ. ಆದರೆ, ಇದು ತೃಪ್ತಿದಾಯಕವಲ್ಲದ ಕಾರಣ ಗ್ರಾಪಂ ಜನಪ್ರತಿನಿಧಿಗಳ ಗೌರವಧನ ಮತ್ತಷ್ಟು ಹೆಚ್ಚಳಕ್ಕೆ ಹೋರಾಟ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ 2 ಅಧಿವೇಶನದಲ್ಲಿ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಟ ಪಕ್ಷ ಮಾಸಿಕ 10 ಸಾವಿರ ರೂ. ಹೆಚ್ಚಿಸಬೇಕು ಮತ್ತು ಕೇರಳ ಮಾದರಿಯ ಆಡಳಿತವನ್ನು ಅನುಸರಿಸಬೇಕು ಎಂದು ತಾನು ಪರಿಷತ್ತಿನಲ್ಲಿ ಆಗ್ರಹಿಸಿದ್ದೆ. ಆದರೆ ಸರಕಾರ ಕೇವಲ 1ರಿಂದ 2 ಸಾವಿರ ರೂ.ವರೆಗೆ ಗೌರವಧನ ಹೆಚ್ಚಿಸಿದೆ. ಕನಿಷ್ಟ5,000 ರೂ. ಹೆಚ್ಚಿಸಬಹುದು ಎಂಬ ಆಶಾ ಭಾವನೆ ನನ್ನಲ್ಲಿತ್ತು. ಗ್ರಾಪಂ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸುವವರಾಗಿದ್ದಾರೆ. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ಇರುವುದರಿಂದ ಮಹಿಳೆಯರು ಮತ್ತು ದುರ್ಬಲ ವರ್ಗದವರು ಚುನಾಯಿತ ಪ್ರತಿನಿಧಿಗಳಾಗಿದ್ದು, ಅವರ ದೈನಂದಿನ ಜೀವನ ನಡೆಸಲು ಆರ್ಥಿಕವಾಗಿ ಶಕ್ತರಾಗಿರುವುದಿಲ್ಲ. ಹಾಗಾಗಿ ಗ್ರಾಪಂ ಪ್ರತಿನಿಧಿಗಳ ಗೌರವಧನ ಹೆಚ್ಚಳಕ್ಕಾಗಿ ಸಂಘಟಿತ ಹೋರಾಟವನ್ನು ಮುಂದುವರಿಸುವುದಾಗಿ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.