ಹಗಲು ಕಚ್ಚೆ-ರುಮಾಲು, ಸಂಜೆಯಾದರೆ ಟೀಶರ್ಟ್- ಪ್ಯಾಂಟು: ಸದನದಲ್ಲಿ ಹೀಗೊಂದು ಸ್ವಾರಸ್ಯಕರ ಚರ್ಚೆ
ಬೆಳಗಾವಿ, ಡಿ. 19: ಉತ್ತರ ಕರ್ನಾಟಕ ಭಾಗದ ಕಚ್ಚೆ, ರುಮಾಲು, ಟೋಪಿ, ಎಲೆ ಅಡಿಕೆ ಸಹವಾಸವನ್ನು ಹೊಂದಿದ ರಾಜಕಾರಣಿಗಳ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಇಂಬು ನೀಡಿತು.
ಸೋಮವಾರ ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ವೇಳೆ ಸಭಾನಾಯಕರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಶಂಕರಗೌಡ ಎನ್.ಪಾಟೀಲ್ ಅವರ ಉಡುಗೆ, ತೊಡುಗೆ ಕುರಿತು ಪ್ರಸ್ತಾಪಿಸಿದ್ದು ಸ್ವಾರಸ್ಯಕರ ಚರ್ಚೆಗೆ ದಾರಿ ಮಾಡಿಕೊಟ್ಟಿತು.
‘ನಾವೆಲ್ಲರೂ ಶಂಕರಗೌಡ ಎನ್.ಪಾಟೀಲ್ ಅವರನ್ನು ಎಸ್ಎನ್ ಪಾಟೀಲ್ ಎಂದೇ ಕರೆಯುತ್ತಿದ್ದೆವು. ಅವರು ಬೆಳಗ್ಗೆ ಹೊತ್ತು ಕಚ್ಛೆ ಪಂಚೆ ಮತ್ತು ವೆಸ್ಟ್ ಕೋಟ್, ಟೋಪಿ ಧರಿಸಿ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸದನಕ್ಕೆ ಬಂದರೂ ಅದೇ ರೀತಿ-ರೀವಾಜು. ಆದರೆ ಸಂಜೆಯಾದ ಕೂಡಲೇ ಟೀ-ಶಟ್ ಮತ್ತು ಫ್ಯಾಂಟ್ ಧರಣಿ ನವ ಯುವಕನಂತೆ ಕಂಗೊಳಿಸುತ್ತಿದ್ದರು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
‘ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ‘ಬೆಳಗ್ಗೆಯಿಂದ ಸಂಜೆ ವರೆಗೆ ಒಂದೇ ರೀತಿಯಲ್ಲಿ ಕಂಡರೆ ನಿಮಗೂ ಬ್ಯಾಸರ, ಅದಕ್ಕೆ ಹೀಗೆ..’ ಎಂದು ಚಟಾಕಿ ಹಾರಿಸುವ ದಾಟಿಯಲ್ಲೆ ಉತ್ತರ ನೀಡುತ್ತಿದ್ದರು. ಗದಗ ಜಿಲ್ಲೆಯಲ್ಲಿ ಅವರಿಗಿಂತ ಪ್ರಭಾವಿ ನಾಯಕರೊಬ್ಬರು ಭಾರಿ ಎತ್ತರದ ಆಳು. ಅವರು ಸದಾ ರುಮಾಲು ಧರಿಸಿ, ರುಮಾಲಿನಲ್ಲೆ ಎಲೆ ಅಡಿಕೆಯನ್ನು ಇಟ್ಟುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು ಎಂದು ಅವರು ಹೇಳಿದರು.
ಇದೆ ವಿಚಾರ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್.ಎನ್. ಪಾಟೀಲ್ ಸೇರಿದಂತೆ ಕೆಲ ಹಿಂದಿನ ತಲೆ ಮಾರಿನವರು ಕಚ್ಛೆ ಪಂಚೆ, ರುಮಾಲು, ಟೋಪಿ ಧರಿಸಿಯೇ ಸದನಕ್ಕೆ ಹಾಜರಾಗುತ್ತಿದ್ದರು. ಸದನದಲ್ಲಿ ನಡೆಯುವ ಚರ್ಚೆಯಲ್ಲಿಯೂ ಗಂಭೀರವಾಗಿ ಪಾಲ್ಗೊಳ್ಳುತ್ತಿದ್ದರು ಎಂದು ಸದನದ ಗಮನ ಸೆಳೆದರು.