60ಕ್ಕೂ ಹೆಚ್ಚು ಹಳೆಯ ಕಾನೂನುಗಳ ರದ್ದತಿಗೆ ಲೋಕಸಭೆಯಲ್ಲಿ ಮಸೂದೆ ಮಂಡನೆ

ಹೊಸದಿಲ್ಲಿ,ಡಿ.19: ಲೋಕಸಭೆ(Lok Sabha)ಯಲ್ಲಿ ಸೋಮವಾರ ಕಾನೂನು ಸಚಿವ ಕಿರಣ ರಿಜಿಜು(Kirana rijiju) ಅವರು 60ಕ್ಕೂ ಅಧಿಕ ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸಲು ಉದ್ದೇಶಿಸಿರುವ ಮಸೂದೆಯನ್ನು ಮಂಡಿಸಿದರು. ಈ ಪೈಕಿ ಒಂದು ಕಾನೂನು 137 ವರ್ಷಗಳಷ್ಟು ಹಳೆಯದಾಗಿದೆ. ರದ್ದತಿ ಮತ್ತು ತಿದ್ದುಪಡಿ ಮಸೂದೆ,2022 ಇನ್ನೊಂದು ಕಾನೂನಿನಲ್ಲಿಯ ಕೆಲವು ಪದಗಳನ್ನು ಬದಲಿಸುವ ಮೂಲಕ ಅದರಲ್ಲಿಯ ತಪ್ಪನ್ನು ಸರಿಪಡಿಸಲೂ ಉದ್ದೇಶಿಸಿದೆ.
ಮಸೂದೆಯು ಜಾರಿಯಲ್ಲಿರದ ಅಥವಾ ಬಳಕೆಯಲ್ಲಿಲ್ಲದ ಅಥವಾ ಪ್ರತ್ಯೇಕ ಕಾಯ್ದೆಯನ್ನಾಗಿ ಉಳಿಸಿಕೊಳ್ಳುವುದು ಅನಗತ್ಯವಾಗಿರುವ ಕಾನೂನುಗಳನ್ನು ರದ್ದುಗೊಳಿಸುವ ನಿಯತಕಾಲಿಕ ಕ್ರಮವಾಗಿದೆ. ಇಂತಹ ಮಸೂದೆಗಳು ಕಾನೂನುಗಳಲ್ಲಿ ಗುರುತಿಸಲಾದ ದೋಷಗಳನ್ನೂ ಸರಿಪಡಿಸುತ್ತವೆ.
1885ರ ಭೂ ಸ್ವಾಧೀನ (ಗಣಿಗಳು) ಕಾಯ್ದೆ ಮತ್ತು 1950ರ ಟೆಲಿಗ್ರಾಫ್ ತಂತಿಗಳ (ಕಾನೂನುಬಾಹಿರ ಸ್ವಾಧೀನ) ಕಾಯ್ದೆ ಮಸೂದೆಯು ರದ್ದುಗೊಳಿಸಲು ಉದ್ದೇಶಿಸಿರುವ ಕಾನೂನುಗಳಲ್ಲಿ ಸೇರಿವೆ. ಸಂಸತ್ತು ಇತ್ತೀಚಿಗೆ ಅಂಗೀಕರಿಸಿದ್ದ ಕೆಲವು ಧನವಿನಿಯೋಗ ಕಾಯ್ದೆಗಳನ್ನೂ ರದ್ದುಗೊಳಿಸಲು ಮಸೂದೆಯು ಬಯಸಿದೆ.
ಪ್ರಧಾನ ಕಾಯ್ದೆಯನ್ನು ಒಮ್ಮೆ ತಿದ್ದುಪಡಿಗೊಳಿಸಿದರೆ ತಿದ್ದುಪಡಿ ಕಾನೂನುಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಶಾಸನ ಪುಸ್ತಕಗಳಲ್ಲಿ ಸ್ವತಂತ್ರ ಕಾನೂನುಗಳಂತೆ ಅವುಗಳ ಉಪಸ್ಥಿತಿಯು ಅನಗತ್ಯವಾಗುತ್ತದೆ.
ಮಸೂದೆಯ ಮೂರನೇ ಅನುಸೂಚಿಯ ಪ್ರಕಾರ ಫ್ಯಾಕ್ಟರಿಂಗ್ ರೆಗ್ಯುಲೇಷನ್ ಕಾಯ್ದೆ,2011ರ 31ಎ ಕಲಮ್‌ನ ಉಪ-ಕಲಮ್ (3)ರಲ್ಲಿ ‘ಕೇಂದ್ರ ಸರಕಾರ ’(Central Govt)ಎಂಬ ಪದಗಳ ಬದಲಿಗೆ ‘ಸರಕಾರ ’ವನ್ನು ಸೇರಿಸಲಾಗುತ್ತದೆ.
ಕಳೆದ ವಾರ ರಿಜಿಜು ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ಮೇ 2014ರಿಂದ ಈವರೆಗೆ 1,486 ಬಳಕೆಯಲ್ಲಿಲ್ಲದ ಮತ್ತು ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ರಾಜ್ಯಗಳಿಗೆ ಸಂಬಂಧಿಸಿದ 76 ಕೇಂದ್ರೀಯ ಕಾಯ್ದೆಗಳನ್ನೂ ಆಯಾ ರಾಜ್ಯ ಶಾಸಕಾಂಗಗಳು ರದ್ದುಗೊಳಿಸಿವೆ ಎಂದು ತಿಳಿಸಿದ್ದರು.







