ವಾಸ್ತವ ಗಡಿ ನಿಯಂತ್ರಣ ರೇಖೆಯ ಯಥಾಸ್ಥಿತಿ ಬದಲಾಯಿಸಲು ಚೀನಾಕ್ಕೆ ಅವಕಾಶ ನೀಡೆವು: ಜೈಶಂಕರ್

ಹೊಸದಿಲ್ಲಿ, ಡಿ. 19: ವಾಸ್ತವ ಗಡಿ ನಿಯಂತ್ರಣ ರೇಖೆಯ ಯಥಾ ಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾಕ್ಕೆ ಭಾರತೀಯ ಸೇನೆ ಅವಕಾಶ ನೀಡುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S. Jaishankar)ಸೋಮವಾರ ಹೇಳಿದ್ದಾರೆ.
ಗಡಿ ವಿವಾದವನ್ನು ಸರಕಾರ ನಿರ್ವಹಿಸುತ್ತಿರುವ ರೀತಿಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಟೀಕೆಗೆ ಪ್ರತಿಕ್ರಿಯೆಯಾಗಿ ಎಸ್. ಜೈಶಂಕರ್ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಸೇನೆಯನ್ನು ಮುಂಚೂಣಿ ಪ್ರದೇಶದಲ್ಲಿ ನಿಯೋಜಿಸಲಾಗಿದೆಯೇ ಹೊರತು ರಾಹುಲ್ ಗಾಂಧಿ ಅವರ ಆದೇಶದಂತೆ ಅಲ್ಲ ಎಂದು ಅವರು ಹೇಳಿದ್ದಾರೆ.
‘‘ಇಂದು ನಾವು ಚೀನಾ ಗಡಿಯಲ್ಲಿ ಹಿಂದಿಗಿಂತಲೂ ಅಧಿಕ ಭಾರತೀಯ ಸೇನೆಯ ನಿಯೋಜನೆಯನ್ನು ಹೊಂದಿದ್ದೇವೆ. 2020ರಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾದ ಚೀನಾ ನಿಯೋಜನೆಗೆ ಪ್ರತಿಯಾಗಿ ಇದನ್ನು ಮಾಡಲಾಗುತ್ತಿದೆ’’ ಎಂದು ಜೈಶಂಕರ್ ಹೇಳಿದರು. ಇಂಡಿಯಾ ಟುಡೆಯ ಭಾರತ-ಜಪಾನ್ ಸಮಾವೇಶದ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.





