ಪಶ್ಚಿಮ ಘಟ್ಟ ಉಳಿವಿಗೆ ಆರು ಹೆಜ್ಜೆಗಳು

ಪಶ್ಚಿಮ ಘಟ್ಟದಲ್ಲಿ ಏನಾಗುತ್ತಿದೆ ಎಂಬ ಕುರಿತ ವೈಜ್ಞಾನಿಕ ಅರಿವಿನಲ್ಲಿ ಗಂಭೀರ ಲೋಪಗಳಿವೆ; ಅರಿವು ಸಾಲುವಷ್ಟಿಲ್ಲ ಎಂದು ನಾವು ಒಪ್ಪಿಕೊಳ್ಳಬೇಕು. ಸರಿಪಡಿಸುವ ಪ್ರಯತ್ನಗಳಿಗೆ ನಿರಂತರವಾದ ಸಾರ್ವಜನಿಕ ಬೆಂಬಲ ಬೇಕು. ಶಿಕ್ಷಣ ಹಾಗೂ ಸಂವಹನದ ಮೂಲಕ ಜನರಿಗೆ ಇಂಥ ವೈಜ್ಞಾನಿಕ ವಿಷಯಗಳ ತಲುಪುವಿಕೆ ಕೂಡಾ ಕಡಿಮೆಯಿದೆ. ಪುನರ್‌ಸ್ಥಾಪನೆ ಕ್ರಮಗಳನ್ನು ಇಡೀ ಪಶ್ಚಿಮ ಘಟ್ಟದಲ್ಲಿ ಕೈಗೊಳ್ಳಬೇಕು. ಇದಕ್ಕೆ ರಾಷ್ಟ್ರೀಯ ಆದ್ಯತೆಯ ಯೋಜನೆ ರೂಪುಗೊಳ್ಳಬೇಕು.
ಅಪಾರ ಸಂಖ್ಯೆಯ ಜನರಿರುವ ದೇಶದ ಮೇಲೆ ಹವಾಮಾನ ಬದಲಾವಣೆಯಿಂದ ಆಗಬಹುದಾದ ಪರಿಣಾಮ ಏನೆಂಬುದು ಗಂಭೀರವಾಗಿ ಯೋಚಿಸಬೇಕಾದ ವಿಚಾರ. ಪರ್ವತಗಳು ಹವಾಮಾನದ ಮೇಲೆ, ನದಿಗಳ ನಿಯಂತ್ರಣ ಹಾಗೂ ಭೂಮಿಯ ಬದಲಾವಣೆ ಮೇಲೆ ಇದು ನೇರ ಪರಿಣಾಮ ಬೀರುತ್ತದೆ. ಯಾವುದೇ ಪರಿಸರ ಸಮಸ್ಯೆಯನ್ನು ಮೂಲದಲ್ಲೇ ಪರಿಹರಿಸಲು ಮೂರು ವಿಷಯ ಅಗತ್ಯವಿದೆ; ಮೊದಲಿಗೆ, ಮನಸ್ಥಿತಿ; ಜಗತ್ತನ್ನು ನಾವು ಹೇಗೆ ನೋಡುತ್ತೇವೆ ಹಾಗೂ ಜಗತ್ತು ಯಾವ ರೀತಿ ಇರಬೇಕು ಎಂದು ಪರಿಭಾವಿಸುತ್ತೇವೆ ಎನ್ನುವುದು. ಎರಡನೆಯದು, ಹಂತಹಂತವಾಗಿ ಅನುಷ್ಠಾನಗೊಳಿಸಬಹುದಾದ, ವಿವರವಾದ ಕ್ರಿಯಾಯೋಜನೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳು. ಮೂರನೆಯದು, ಏನಾಗುತ್ತಿದೆ ಎಂಬುದರ ಮೂಲಭೂತ ಅರಿವು. ಇದಕ್ಕೆ ಪರಿಸರ ಹಾಗೂ ಇಕಾಲಜಿಯ ಆಳವಾದ ಜ್ಞಾನ ಅಗತ್ಯವಿದೆ.
ಪಶ್ಚಿಮ ಘಟ್ಟದಲ್ಲಿ ಏನಾಗುತ್ತಿದೆ ಎಂಬ ಕುರಿತ ವೈಜ್ಞಾನಿಕ ಅರಿವಿನಲ್ಲಿ ಗಂಭೀರ ಲೋಪಗಳಿವೆ; ಅರಿವು ಸಾಲುವಷ್ಟಿಲ್ಲ ಎಂದು ನಾವು ಒಪ್ಪಿಕೊಳ್ಳಬೇಕು. ಸರಿಪಡಿಸುವ ಪ್ರಯತ್ನಗಳಿಗೆ ನಿರಂತರವಾದ ಸಾರ್ವಜನಿಕ ಬೆಂಬಲ ಬೇಕು. ಶಿಕ್ಷಣ ಹಾಗೂ ಸಂವಹನದ ಮೂಲಕ ಜನರಿಗೆ ಇಂಥ ವೈಜ್ಞಾನಿಕ ವಿಷಯಗಳ ತಲುಪುವಿಕೆ ಕೂಡಾ ಕಡಿಮೆಯಿದೆ. ಪುನರ್‌ಸ್ಥಾಪನೆ ಕ್ರಮಗಳನ್ನು ಇಡೀ ಪಶ್ಚಿಮ ಘಟ್ಟದಲ್ಲಿ ಕೈಗೊಳ್ಳಬೇಕು. ಇದಕ್ಕೆ ರಾಷ್ಟ್ರೀಯ ಆದ್ಯತೆಯ ಯೋಜನೆ ರೂಪುಗೊಳ್ಳಬೇಕು. ಪಶ್ಚಿಮಘಟ್ಟ ದೇಶದ ಹಲವು ಭೌತಿಕ ಪ್ರಾಂತಗಳಲ್ಲಿ ಒಂದು ಮಾತ್ರ. ಒಂದು ಪ್ರಾಂತೀಯ ಸಮಸ್ಯೆಯನ್ನು ರಾಷ್ಟ್ರೀಯ ಆದ್ಯತೆಯ ಕ್ರಿಯಾಯೋಜನೆಯಾಗಿ ಮಾರ್ಪಡಿಸಲು ಹೆಚ್ಚು ಜನಬೆಂಬಲ ಬೇಕಾಗುತ್ತದೆ.
ವಾಸ್ತವವೆಂದರೆ, ಪಶ್ಚಿಮ ಘಟ್ಟಕ್ಕೆ ಸ್ಪಷ್ಟವಾಗಿ ಗುರುತಿಸಿದ ಗಡಿ ರೇಖೆಗಳೇ ಇಲ್ಲ. ಆರು ರಾಜ್ಯಗಳು, 1,600 ಕಿ.ಮೀ. ಉದ್ದ ಹಾಗೂ 1.5 ಲಕ್ಷ ಚದರ ಕಿ.ಮೀ. ಭೂಪ್ರದೇಶದಲ್ಲಿ ವ್ಯಾಪಿಸಿರುವ ಘಟ್ಟ ಪ್ರದೇಶದಲ್ಲಿ ಹಲವು ದಶಲಕ್ಷ ಜನ ವಾಸಿಸುತ್ತಿದ್ದಾರೆ. ಘಟ್ಟಗಳ ಆಡಳಿತವು ರಾಜ್ಯಗಳು, ಜಿಲ್ಲೆಗಳು, ತಾಲೂಕುಗಳು ಮತ್ತು ಪಂಚಾಯತ್‌ಗಳಾಗಿ ವಿಭಜಿಸಲ್ಪಟ್ಟಿದ್ದು, ಈ ರಾಜಕೀಯ- ಆಡಳಿತಾತ್ಮಕ ತುಣುಕುಗಳನ್ನು ಆಧರಿಸಿ ಎಲ್ಲ ಸರಕಾರಿ ಚಟುವಟಿಕೆಗಳು ನಡೆಯುತ್ತಿವೆ. ಪ್ರಜಾಸತಾತ್ಮಕ ನಿರ್ಧಾರಗಳು, ಕನಿಷ್ಠ ಪಕ್ಷ ಸೈದ್ಧಾಂತಿಕವಾಗಿ, ಪ್ರಾತಿನಿಧಿಕ ರಾಜಕೀಯ ಸಂವಾದವನ್ನು ಆಧರಿಸಿರಬೇಕು. ದೇಶದ ಪರ್ವತ ಪ್ರದೇಶಗಳಿರುವ ಪ್ರಾಂತಗಳನ್ನು ಹಿಂದುಳಿದವು ಎಂದು ಪರಿಗಣಿಸಲಾಗುತ್ತಿದ್ದು, ಇಲ್ಲಿರುವವರಿಗೆ ತಮ್ಮ ಭವಿಷ್ಯ ಇಲ್ಲವೇ ವರ್ತಮಾನವನ್ನು ನಿರ್ಧರಿಸುವಲ್ಲಿ ಏನೇನೂ ಪಾತ್ರವಿಲ್ಲ. ಬೆಟ್ಟ ಪ್ರದೇಶಗಳ ಜನರು ಆದಿವಾಸಿಗಳಾಗಿದ್ದಲ್ಲಿ ಇದು ಸಂಪೂರ್ಣ ಸತ್ಯ. ಸರಿಪಡಿಸುವ ಕ್ರಮಗಳನ್ನು ಜಾರಿಗೊಳಿಸಲು ಹೆಚ್ಚು ಕಾಲ ಹಾಗೂ ಶ್ರಮ ಬೇಕಾಗುತ್ತದೆ.
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಕೆಲವು ವಾಸ್ತವಿಕ ನಡೆಗಳ ಅಗತ್ಯವಿದೆ.
1. ಮೊದಲಿಗೆ, ಪಶ್ಚಿಮ ಘಟ್ಟದ ಸಮಗ್ರ ಚಿತ್ರಣದ ಅಭಿವೃದ್ಧಿಪಡಿಸುವಿಕೆ; ಪ್ರದೇಶವೊಂದು ಘಟ್ಟದ ಭಾಗವೇ ಅಲ್ಲವೇ ಎಂಬುದನ್ನು ನಿರ್ಧರಿಸಲು ಕೆಲವು ಸೂತ್ರಗಳು ಇರಬೇಕು- ಅದು ಎತ್ತರ, ಜೈವಿಕ ವಾತಾವರಣ ಅಥವಾ ಭೂವಿಜ್ಞಾನ ಆಗಿರಬಹುದು.
2. ಪ್ರಸಕ್ತ ಸ್ಥಿತಿಯ ಕರಾರುವಾಕ್ ಚಿತ್ರದ ಅಭಿವೃದ್ಧಿ. ಉಪಗ್ರಹದ ಛಾಯಾಚಿತ್ರಗಳ ಸಂಯೋಜನೆಯಿಂದ ಘಟ್ಟದ ಜೀವಂತ ಚಿತ್ರಣ ನಮಗೆ ಸಿಗುವುದಿಲ್ಲ. ಘಟ್ಟದ ಪ್ರತಿಯೊಂದು ಭಾಗದಲ್ಲಿ ಭೌಗೋಳಿಕ, ಜೈವಿಕ ಹಾಗೂ ಮಾನವನ ಚಾರಿತ್ರಿಕ ಪೂರ್ವಚರಿತ್ರೆಯ ಗುರುತುಗಳು ಇದ್ದು, ಅವು ಬದಲಾವಣೆಯನ್ನು ಈಗಲೂ ಪ್ರಭಾವಿಸುತ್ತಿವೆ. ಆದ್ದರಿಂದ, ಪ್ರಸಕ್ತ ಪರಿಸ್ಥಿತಿಯ ಚಿತ್ರಣವು ವಿವರವಾದ ನೆಲಮಟ್ಟದ ಅಧ್ಯಯನವನ್ನು ಆಧರಿಸಬೇಕು. ಅದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ.
3. ಅರಣ್ಯ, ಕೃಷಿ, ಜಲಸಂಪನ್ಮೂಲಗಳು, ಮಾನವ ವಸತಿಗಳು, ಸಂವಹನ ಕಾರ್ಯಜಾಲಗಳು ಇತ್ಯಾದಿಗಳನ್ನು ಆದ್ಯತೆಗೆ ಅನುಗುಣವಾಗಿ ವಿಭಾಗಿಸುವುದು: ಕೆಲವು ಕ್ಷೇತ್ರದಲ್ಲಿ ಸ್ಪಷ್ಟ ಪರಿಣಾಮ ಕಾಣಲು ದೀರ್ಘ ಕಾಲ ಬೇಕಾಗುತ್ತದೆ. ಪಶ್ಚಿಮ ಘಟ್ಟದ ಬೇರೆ ಬೇರೆ ಸ್ತರಗಳಲ್ಲಿ ಬೇರೆಯದೇ ಆದ್ಯತೆಯ ವಿಭಾಗಗಳು ಇರಬಹುದು. ಹೆಚ್ಚು ಚೈತನ್ಯಶಾಲಿ, ದುರ್ಬಲ ಹಾಗೂ ಮೌಲ್ಯಯುತ ವಿಭಾಗಗಳು ಯಾವುದು ಎಂಬುದನ್ನು ಗುರುತಿಸಿ, ಆದ್ಯತೆಗೆ ಅನುಗುಣವಾಗಿ ಮಧ್ಯಪ್ರವೇಶ ಮಾಡಬೇಕು ಹಾಗೂ ದೀರ್ಘಕಾಲೀನ ಕ್ರಿಯೆಗಾಗಿ ಯೋಜನೆ ರೂಪಿಸಬೇಕು.
4. ಶತಮಾನಗಳಿಂದ ಪಶ್ಚಿಮ ಘಟ್ಟದಲ್ಲಿ ಅಣೆಕಟ್ಟುಗಳ ನಿರ್ಮಾಣ, ರಸ್ತೆ ನಿರ್ಮಾಣ, ಜನವಸತಿ ಪ್ರದೇಶಗಳ ಅಭಿವೃದ್ಧಿ ಇತ್ಯಾದಿಗೆ ಭಾರೀ ಮೊತ್ತ ಹೂಡಿಕೆಯಾಗಿದೆ. ಈ ಎಲ್ಲ ಅಭಿವೃದ್ಧಿ ಚಟುವಟಿಕೆಗಳು ಕೆಳ ಹರಿವಿನಲ್ಲಿ ಕೊಂಡಿಗಳು, ಜಲಾನಯನ ಪ್ರದೇಶದ ಅವಲಂಬನೆ ಹಾಗೂ ಪೂರೈಕೆ ಜವಾಬ್ದಾರಿಯನ್ನು ಹೊಂದಿರುವುದರಿಂದ, ಇವುಗಳನ್ನು ಹಠಾತ್ತನೆ ಕಡಿತಗೊಳಿಸುವುದು ಸಾಧ್ಯವಿಲ್ಲ. ಚಟುವಟಿಕೆಗಳಿಗೆ ಸಾಧ್ಯವಿರುವಷ್ಟು ಕಾಲ ಒತ್ತಾಸೆ ನೀಡಬೇಕು. ಉದ್ದೇಶಿತ ಗುರಿಯನ್ನು ಮುಟ್ಟಲು ಅವುಗಳ ಜೀವನ ಸಾಮರ್ಥ್ಯ ಹಾಗೂ ಪರಿಣಾಮಕಾರಿತ್ವವನ್ನು ಹೆಚ್ಚಿಸಬೇಕು. ಪುನಃಸ್ಥಾಪನೆ ಚಟುವಟಿಕೆಗಳಿಂದ, ಉದಾಹರಣೆಗೆ, ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಹೆಚ್ಚಿ ಸುವುದು, ರಸ್ತೆಯ ಜೀವಿತಾವಧಿಯನ್ನು ಅಧಿಕಗೊಳಿಸುವುದು ಹಾಗೂ ಬಹುವಿಧದ ಬಳಕೆ ಮೂಲಕ ತೋಟಗಾರಿಕೆ, ಆದಾಯ ಹೆಚ್ಚಳ ಆಗಬೇಕು.
5. ನರೇಗಾ, ಕೃಷಿ ಅಥವಾ ಆದಿವಾಸಿ ಅಭಿವೃದ್ಧಿ ಇತ್ಯಾದಿ ಚಾಲ್ತಿಯಲ್ಲಿರುವ ಸರಕಾರಿ ಯೋಜನೆಗಳನ್ನು ಗುರುತಿಸಬೇಕು. ಇಂಥ ಬಹುತೇಕ ಕಾರ್ಯಕ್ರಮಗಳಿಗೆ ಸಮಗ್ರತೆ ಇಲ್ಲ ಅಥವಾ ಪ್ರಾದೇಶಿಕ ಭೌಗೋಳಿಕ ಪರಿಪ್ರೇಕ್ಷವಿಲ್ಲ. ಇವನ್ನು ಪರಿಸರ ಪುನರುತ್ಥಾನ ಕಾರ್ಯಕ್ರಮಗಳೊಡನೆ ಸಂಯೋಜಿಸಿ, ನಿರ್ದಿಷ್ಟ ಪ್ರದೇಶದಲ್ಲಿ ಜೈವಿಕ ರಾಶಿಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಪ್ರಸಕ್ತದ ಕಾನೂನು, ಸಂಸ್ಥೆಗಳು ಮತ್ತು ಚಟುವಟಿಕೆ ಕ್ಷೇತ್ರಗಳನ್ನು ಮೇಲಿನ ಉದ್ದೇಶಕ್ಕಾಗಿ ಹೆಚ್ಚುವರಿ ಯೋಜನೆ ರೂಪಿಸುವಿಕೆ ಇಲ್ಲವೇ ಹೆಚ್ಚು ಕಾಲ ಕಾಯುವ ಅವಶ್ಯಕತೆಯಿಲ್ಲದೆ ಅಳವಡಿಸಿಕೊಳ್ಳಬಹುದಾಗಿದೆ. ಅರಣ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮರುವಿನ್ಯಾಸ ಸುಲಭ. ಏಕೆಂದರೆ, ಅರಣ್ಯ ಇಲಾಖೆ ಸಂಪತ್ತಿನ ಏಕೈಕ ಸಂರಕ್ಷಕ. ಚಾಲ್ತಿಯಲ್ಲಿರುವ ಬಹುತೇಕ ಅರಣ್ಯ ಕಾಯ್ದೆಗಳು ಹಾಗೂ ದೈನಂದಿನ ಉಪಕ್ರಮಗಳು ಸಂರಕ್ಷಣೆಗೆ ಸಂಬಂಧಿಸಿವೆ. ಖಾಸಗಿ ಒಡೆತನದ ಭೂಮಿಗಳಲ್ಲಿನ ಕೃಷಿ ಚಟುವಟಿಕೆಗಳ ಬದಲಾವಣೆ ಸ್ವಲ್ಪಕಷ್ಟಕರ. ಆದರೆ, ಅಸಾಧ್ಯವೇನಲ್ಲ. ಕಾರ್ಪೊರೇಟ್ ಸಂಸ್ಥೆಗಳ ತೋಟಗಾರಿಕೆ ಪ್ರದೇಶದಲ್ಲಿ ಮಧ್ಯಪ್ರವೇಶ ಪ್ರಾಯಶಃ ಸುಲಭ ಇರಬಹುದು.
6. ಶಿಕ್ಷಣ ಹಾಗೂ ಅರಿವು ಮೂಡಿಸುವ ಮೂಲಕ ಸಾರ್ವಜನಿಕರಲ್ಲಿ ಕಾಳಜಿ ಹೆಚ್ಚಿಸುವುದು. ಜೊತೆಗೆ, ಜ್ಞಾನಮೂಲವನ್ನು ಸೃಷ್ಟಿಸುವ ಸಂರಕ್ಷಣೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಕ್ರಿಯಾಯೋಜನೆಗಳನ್ನು
ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕಿದೆ. ಶಾಲೆ, ಕಾಲೇಜುಗಳಲ್ಲಿ ಕೃಷಿ ಅಥವಾ ಅರಣ್ಯ ನಿರ್ವಹಣೆ ತರಬೇತಿಯನ್ನು ಮರುವಿನ್ಯಾಸಗೊಳಿಸುವುದು. ಇದು ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಮೂಲಭೂತ ಮಾಹಿತಿ ಅಳವಡಿಕೆ ಅಥವಾ ದೇಶದಲ್ಲಿ ಪ್ರಸಕ್ತ ಪರಿಸರದ ಪರಿಸ್ಥಿತಿ ಕುರಿತು ಮಾಹಿತಿ ಸೇರ್ಪಡೆಗಿಂತ ಸುಲಭ.
ಬೇರೆ ಮಾತೇ ಇಲ್ಲ; ಭಾರತ ಪರ್ಯಾಯ ದ್ವೀಪದಲ್ಲಿ ಪಶ್ಚಿಮ ಘಟ್ಟಗಳು ಅತ್ಯಂತ ಮುಖ್ಯವಾದ ಭೌಗೋಳಿಕ ಘಟಕಗಳು. ಅದರ ಅರಣ್ಯ ಸಂಪತ್ತು ಇಡೀ ಪರ್ಯಾಯ ದ್ವೀಪದ ದೀರ್ಘಕಾಲಿನ ಅಸ್ತಿತ್ವದ ಕೀಲಿಕೈ. ಅಳಿದುಳಿದ ಕಾಡಿನ ರಕ್ಷಣೆ ಮೂಲಕ ನಾವು ಜೀವವೈವಿಧ್ಯವನ್ನು ಉಳಿಸಿಕೊಳ್ಳಲೇಬೇಕು. ಏಕೆಂದರೆ, ಅದು ಮಾನವಕುಲದ ಪಿತ್ರಾರ್ಜಿತ ಆಸ್ತಿ. ಪ್ರಸಕ್ತದ ಅರಾಜಕ ಸ್ಥಿತಿಯನ್ನು ಸರಿಗೊಳಿಸಲು ಅಸಂಖ್ಯಾತ ಅಡೆತಡೆಗಳಿವೆ ಎನ್ನುವುದು ನಿಜ. ಆದರೆ, ಅದನ್ನು ನಿವಾರಿಸುವ ಹೊರತು ನಮಗೆ ಬೇರೆ ದಾರಿ ಇಲ್ಲ. ಮೊದಲ ಹೆಜ್ಜೆ-ಈ ಭೂಮಿಗೆ ಬೇಕಾಗಿರುವುದನ್ನು ಮಾಡುವ ಇಚ್ಛೆ ಹಾಗೂ ಶ್ರದ್ಧೆ. ತಕ್ಷಣ ಆಗಬೇಕಿರುವುದೇನು
ಹಾಗೂ ಆನಂತರ ಆಗಬೇಕಿರುವುದೇನು ಎನ್ನುವುದನ್ನು ಪರಿಗಣಿಸಿ, ಆದ್ಯತೆಗೆ ಅನುಗುಣವಾಗಿ ಕೆಲಸ ಮಾಡಬೇಕು. ಈ ಪರ್ವತ ಶ್ರೇಣಿಗಳ ಆರೋಗ್ಯವನ್ನು ಉತ್ತಮಗೊಳಿಸಬೇಕು ಎನ್ನುವ ನಿರ್ಧಾರ ನಮ್ಮದಾದಲ್ಲಿ ಯಾವುದೂ ಅಸಾಧ್ಯವಲ್ಲ.







