ಡಿ.24: ಮಂಗಳೂರಿನಲ್ಲಿ ಎಸ್‌ವೈಎಸ್ ಘೋಷಣಾ ಸಮಾವೇಶ
ಮಂಗಳೂರು, ಡಿ.19: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘವು (ಎಸ್‌ವೈಎಸ್) ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ ಸಂಘಟನೆಯ 30ನೇ ವರ್ಷಾಚರಣೆಯ ಘೋಷಣಾ ಸಮಾವೇಶವು ಡಿ.24ರಂದು ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
2023ರ ಜನವರಿ 24 ರಂದು ಶಿವಮೊಗ್ಗದಲ್ಲಿ ಉದ್ಘಾಟನೆಗೊಂಡು 2024 ಜನವರಿ 24 ರಂದು ಸಮಾರೋಗೊಳ್ಳುವ ಒಂದು ವರ್ಷದ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದ್ದು, ಇದರ ಘೋಷಣೆಯನ್ನು ಮಂಗಳೂರಿನಲ್ಲಿ ನಡೆಸಲಾಗುವುದು. ಸಮಾವೇಶದ ವೇದಿಕೆಗೆ ಎಸ್‌ವೈಎಸ್ ಪ್ರಥಮ ಅವಧಿಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಅಬ್ದುರಹ್ಮಾನ್ ಇಂಜಿನಿಯರ್ ಅವರ ಹೆಸರನ್ನಿಡಲಾಗಿದೆ.
ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ವರ್ಷಾಚರಣೆಯನ್ನು ಘೋಷಣೆ ಮಾಡಲಿದ್ದು, ಸಮಸ್ತ ಕಾರ್ಯದರ್ಶಿ ಮೌಲಾನಾ ಪೆರೋಡ್ ಅಬ್ದುರಹ್ಮಾನ್ ಸಖಾಫಿ ಸಂದೇಶ ಭಾಷಣ ಮಾಡಲಿದ್ದಾರೆ.
ಒಂದು ವರ್ಷದ ಕಾರ್ಯ ಯೋಜನೆಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು ಪ್ರಕಟಿಸಲಿದ್ದಾರೆ. ಸಮಾವೇಶದಲ್ಲಿ ಸಂಘಟನೆಗೆ ಕಳೆದ ಮೂರು ದಶಕಗಳಲ್ಲಿ ನೇತೃತ್ವ ನೀಡಿದ ರಾಜ್ಯಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಸನ್ಮಾನ ಮಾಡಲಾಗುವುದು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಲಿದ್ದು, ಮೂವತ್ತನೇ ವರ್ಷಾಚರಣೆಯ ನಿರ್ವಹಣಾ ಸಮಿತಿ, ಪರ್ಲ್ ಬೋಡಿಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಳ್ ಉಜಿರೆ ಉದ್ಘಾಟನೆ ಮಾಡಲಿದ್ದಾರೆ ಎಂದು ಪರ್ಲ್ ಬೋಡಿ ನಿರ್ವಾಹಕ ಸಂಚಾಲಕ ಅಶ್ರಫ್ ಸಅದಿ ಮಲ್ಲೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.