ನಿರ್ವಹಣೆ ಇಲ್ಲದೆ ಪಾಳು ಬಿದ್ದ 132 ಇ-ಶೌಚಾಲಯ
214 ಇ-ಶೌಚಾಲಯಗಳ ಪೈಕಿ ಕೇವಲ 82 ಚಾಲ್ತಿಯಲ್ಲಿ ►ಡಿ.21ಕ್ಕೆ ಹೊಸ ಟೆಂಡರ್ ಸಾಧ್ಯತೆ

ಬೆಂಗಳೂರು, ಡಿ.19: ಆಧುನಿಕ ತಂತ್ರಜ್ಞಾನ ಆಧಾರಿತ ಸ್ವಯಂಪ್ರೇರಿತ ಸ್ವಚ್ಛತಾ ಸಾಮರ್ಥ್ಯವುಳ್ಳ ಇ–ಶೌಚಾಲಯವನ್ನು ಕಾಪಾಡಿಕೊಳ್ಳುವುದು ಬಿಬಿಎಂಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಬಿಬಿಎಂಪಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸಾರ್ವಜನಿಕರ ಶೌಚಾಲಯ ಬಾಧೆಯನ್ನು ತಪ್ಪಿಸುವ ಸಲುವಾಗಿ, ಪರಿಸರ ಸ್ನೇಹಿ ಮತ್ತು ನಗರದ ಪ್ರದೇಶದ ನಾಗರಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ ಮೂರು ಹಂತದಲ್ಲಿ 214 ಕಡೆಗಳಲ್ಲಿ ಇ-ಶೌಚಾಲಯಗಳನ್ನು ನಿರ್ಮಿಸಿತ್ತು. ಆದರೆ, ಪ್ರಸ್ತುತ 132 ಇ-ಶೌಚಾಲಯಗಳು ಸಂಪೂರ್ಣ ಹದಗೆಟ್ಟು ಬಳಕೆಗೆ ಬಾರದ ಸ್ಥಿತಿಯನ್ನು ತಲುಪಿದ್ದು, ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಮಾಡಿರುವ ಯೋಜನೆಗೆ ನಿರ್ವಹಣೆ ಮತ್ತು ವಿದ್ಯುತ್ ಕೊರತೆಯಿಂದಾಗಿ ಸಾರ್ವಜನಿಕರ ಬಳಕೆಗೆ ಸಾಧ್ಯವಾಗುತ್ತಿಲ್ಲ.
ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪ್ರತಿ ಇ-ಶೌಚಾಲಯಕ್ಕೆ 5 ಲಕ್ಷ ರೂ.ನಂತೆ ಒಟ್ಟು 94 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 214 ಇ-ಶೌಚಾಲಯವನ್ನು ನಿರ್ಮಿಸಿ ಅವುಗಳ ನಿರ್ವಹಣೆಗೆ ನೀಡಿದ್ದ ಟೆಂಡರ್‍ನ ಕಾಲಾವಧಿ ಮುಕ್ತಾಯಗೊಂಡಿದ್ದು, ಕೇವಲ 82 ಕಡೆಗಳಲ್ಲಿ ಮಾತ್ರ ನಿರ್ವಹಣೆ ಚಾಲ್ತಿಯಲ್ಲಿದೆ. ಇನ್ನುಳಿದ 132 ಕಡೆಗಳಲ್ಲಿ ಇ-ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ.
ಸುಧಾರಿತ ತಂತ್ರಜ್ಞಾನದ ಇ-ಶೌಚಾಲಯದಿಂದ ನೀರಿನ ಉಳಿಕೆಯಾಗುತ್ತದೆ. ಸಾಮಾನ್ಯ ಶೌಚಾಲಯದಲ್ಲಿ 5 ರಿಂದ 6 ಲೀಟರ್ ನೀರು ಫ್ಲಶ್‍ನಲ್ಲಿ ಹೋಗುತ್ತದೆ. ಆದರೆ, ಇ-ಶೌಚಾಲಯದಲ್ಲಿ ಫ್ಲಶ್‍ಗೆ 1.5 ಲೀಟರ್ ನೀರು ಸಾಕು. ಹಾಗೆಯೇ ಇದನ್ನು 3.4 ಗ್ರೇಡ್ ಸ್ಟೀಲ್ ಯೂನಿಟ್ ನಿಂದ ತಯಾರಿಸಲಾಗಿದೆ. ಹೀಗಾಗಿ, ಇದು ತುಕ್ಕು ಸಹ ಹಿಡಿಯುವುದಿಲ್ಲ. ಅಲ್ಲದೆ, ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದಾಗಿದ್ದು, ಇಷ್ಟೆಲ್ಲ ತಂತ್ರಜ್ಞಾನವಿರುವ ಶೌಚಾಲಯಗಳು ಕೆಟ್ಟು ನಿಲ್ಲುತ್ತಿರುವುದು ಇದರ ಗುಣಮಟ್ಟದ ಬಗ್ಗೆಯೇ ಪ್ರಶ್ನೆ ಮಾಡುವಂತಾಗಿದೆ.
ಆದರೆ, ಇ-ಶೌಚಾಲಯವನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸದಿರುವುದೇ ಪ್ರಮುಖ ಕಾರಣವಾಗಿದ್ದು, ಕೆಲವು ಕಡೆಗಳಲ್ಲಿ ಶೌಚಾಲಯದ ಹಣಕ್ಕಾಗಿ ಕಿಡಿಗೇಡಿಗಳು ಹಾಳು ಮಾಡಿ ಕಳ್ಳತನ ಎಸಗಿರುವ ಘಟನೆಗಳು ನಡೆದಿವೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಇ- ಶೌಚಾಲಯವನ್ನು 2 ಅಥವಾ 5 ರೂ. ನಾಣ್ಯಗಳನ್ನು ಹಾಕಿ ಬಳಸಬಹುದಾಗಿದ್ದು, ಕೆಲವರು ಈ ಹಣ ಉಳಿತಾಯ ಮಾಡಲು ಇ-ಶೌಚಾಲಯದ ಬಾಗಿಲಿಗೆ ಕಲ್ಲು, ದಾರ ಕಟ್ಟುವಂತಹ ಕೆಲಸಕ್ಕೆ ಮುಂದಾಗಿರುವುದರಿಂದ ಇ-ಶೌಚಾಲಯಗಳು ಕೆಟ್ಟುನಿಲ್ಲುತ್ತಿವೆ. ಹತ್ತು ಜನ ಬಳಸಿದ ಕೂಡಲೇ ಶೌಚಾಲಯದಲ್ಲಿ ಅಳವಡಿಸಿರುವ ತಂತ್ರಜ್ಞಾನದ ಸಹಾಯದಿಂದ ಶೌಚಾಲಯ ತನ್ನಿಂದ ತಾನೇ ಸ್ವಚ್ಛಗೊಳ್ಳುತ್ತದೆ. ಆದರೆ, ಶೌಚಾಲಯದ ಬಾಗಿಲು ಸದಾ ತೆರೆದೇ ಇರುವುದರಿಂದ ಇದು ಹಾಳಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲೂ ಬೆಂಗಳೂರು ಉತ್ತಮ ಶ್ರೇಣಿ ಗಳಿಸಲು ಸಾಧ್ಯವಾಗುತ್ತಿಲ್ಲ. ಬಯಲು ಬಹಿರ್ದೆಸೆ ಕಾರಣಕ್ಕೆ ಹೆಚ್ಚಿನ ಅಂಕ ಪಡೆಯಲು ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಬಿಬಿಎಂಪಿ ಸುರಕ್ಷತೆ ಮತ್ತು ನಿರ್ವಹಣೆಯ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ನಗರದ ನಾಗರಿಕರೂ ಸಹ ಸಮರ್ಪಕವಾಗಿ ಇ-ಶೌಚಾಲಯಗಳನ್ನು ಬಳಸಲು ಮುಂದಾಗಬೇಕು ಹೀಗಿದ್ದಾಗ ಮಾತ್ರ ಬೆಂಗಳೂರು ನಗರದ ಸ್ವಚ್ಛತಾ ನೈರ್ಮಲ್ಯ ಕಾಪಾಡಿಕೊಂಡು ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಗರಿಷ್ಠ ಶ್ರೇಣಿ ಗಳಿಸಲು ಸಾಧ್ಯವಾಗುತ್ತದೆ.
► ದುರ್ಬಳಕೆಯಿಂದ ಸೆನ್ಸಾರ್ ಸಮಸ್ಯೆ
ಬೆಂಗಳೂರು ನಗರದ ಜನರು ಎಲ್ಲೆಂದರಲ್ಲಿ ಮೂತ್ರ ವಿರ್ಸಜನೆ ಮಾಡುವುದು. ಇ- ಶೌಚಾಲಯ ಪರಿಚಯಿಸಿದ ನಂತರ ಮೇಲೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಸಾರ್ವಜನಿಕರು ಇ- ಶೌಚಾಲಯವನ್ನು ಬಳಸದೆ ಅದರ ಹಿಂದೆ ಹೋಗಿ ಮೂತ್ರ ವಿರ್ಸಜನೆ ಮಾಡುತ್ತಿರುವುದು. ಇದಿಷ್ಟೇ ಅಲ್ಲದೆ ವಸಂತನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವೆಡೆ ಕುಡುಕರು ಬಿಯರ್ ಬಾಟಲಿಗಳನ್ನು ಇ-ಶೌಚಾಲಯದ ಸುತ್ತಲೂ ಬಿಸಾಡಿರುವುದರಿಂದ ಇ-ಶೌಚಾಲಯದ ಸೆನ್ಸಾರ್‍ಗಳು ಹಾಳಾಗುತ್ತಿದೆ.
ಡಿ.21ಕ್ಕೆ ಹೊಸ ಟೆಂಡರ್ ಸಾಧ್ಯತೆ
ಬೆಂಗಳೂರು ನಗರದಲ್ಲಿ 132 ಇ-ಶೌಚಾಲಯಗಳ ನಿರ್ವಹಣೆ ನಿಂತು ಹೋಗಿದ್ದು, ಪ್ರಮುಖವಾದ 82 ಕಡೆಗಳಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇ-ಶೌಚಾಲಯ ಯೋಜನೆಯ ಟೆಂಡರ್ ಅವಧಿ ಕಳೆದ ಆರು ತಿಂಗಳ ಹಿಂದೆಯೇ ಮುಗಿದಿರುವುದರಿಂದ ಇದೇ ಡಿ.21ಕ್ಕೆ ಹೊಸ ಟೆಂಡರ್ ಕರೆಯಲು ಯೋಚನೆ ನಡೆಸಲಾಗಿದೆ. ಆದ್ದರಿಂದ ಎಲ್ಲ ವ್ಯವಸ್ಥೆ ಆಗುವವರೆಗೂ ಇ-ಶೌಚಾಲಯಗಳನ್ನು ನಿರ್ವಹಣೆ ಮಾಡುವಂತೆ ಮೊದಲಿದ್ದ ಏಜನ್ಸಿಗೆ ಮನವಿ ಮಾಡಲಾಗಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
.jpeg)







