ಅರ್ಜೆಂಟೀನ ಚಾಂಪಿಯನ್: ಉಚಿತವಾಗಿ 1500 ಪ್ಲೇಟ್ ಬಿರಿಯಾನಿ ವಿತರಿಸಿದ ಕೇರಳ ಹೋಟೆಲ್ ಮಾಲಕ

ತ್ರಿಸೂರ್: ಒಂದು ವೇಳೆ ಅರ್ಜೆಂಟೀನ (Argentina) ವಿಶ್ವಕಪ್ ಜಯಿಸಿದರೆ 1000 ಪ್ಲೇಟ್ ಬಿರಿಯಾನಿಯನ್ನು ಉಚಿತವಾಗಿ ಹಂಚಲಾಗುವುದು ಎಂದು ಫೀಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಭರವಸೆ ನೀಡಿದ್ದ ಅರ್ಜೆಂಟೀನ ತಂಡದ ಕಟ್ಟಾ ಅಭಿಮಾನಿ ಹೋಟೆಲ್ ಮಾಲಕರೊಬ್ಬರು, ತಮ್ಮ ಭರವಸೆಯನ್ನು ಉಳಿಸಿಕೊಂಡು ಫುಟ್‌ಬಾಲ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.
ಕೇರಳ ದಕ್ಷಿಣ ಭಾಗದ ಜಿಲ್ಲೆಯಾದ ತ್ರಿಸೂರ್‌ನ ಪಲ್ಲಿಮೂಲ ಪ್ರದೇಶದ ರಾಕ್‌ಲ್ಯಾಂಡ್ ಹೋಟೆಲ್ ಮಾಲಕ ಶಿಬು ವಿಶ್ವಕಪ್ ಪ್ರಾರಂಭಕ್ಕೂ ಮುನ್ನ ಒಂದು ವೇಳೆ ಅರ್ಜೆಂಟೀನಾ ಪ್ರಶಸ್ತಿ ಜಯಿಸಿದರೆ 1000 ಪ್ಲೇಟ್ ಬಿರಿಯಾನಿಯನ್ನು ಉಚಿತವಾಗಿ ಹಂಚುವುದಾಗಿ ಭರವಸೆ ನೀಡಿದ್ದರು. ಆದರೆ, ಅರ್ಜೆಂಟೀನಾ ತಂಡ ಫೈನಲ್‌ನಲ್ಲಿ ಜಯಿಸಿದ ನಂತರ ಅವರ ಹೋಟೆಲ್‌ನಲ್ಲಿ ಈ ಹಿಂದೆ ನೀಡಿದ್ದ ಭರವಸೆಗಿಂತ ಹೆಚ್ಚು ಪ್ಲೇಟ್ ಬಿರಿಯಾನಿಯನ್ನು ಉಚಿತವಾಗಿ ಹಂಚಿಕೆ ಮಾಡಲಾಯಿತು.
ತಮ್ಮ ಭರವಸೆಯಿಂದ ಹಿಂದೆ ಸರಿಯದ ಶಿಬು, ಹೆಚ್ಚುವರಿಯಾಗಿ 500 ಪ್ಲೇಟ್ ಬಿರಿಯಾನಿಯನ್ನು ಹಂಚಿಕೆ ಮಾಡಿ ತಮ್ಮ ಗ್ರಾಹಕರ ಮೆಚ್ಚುಗೆಗೆ ಪಾತ್ರರಾದರು.
ಬೆಳಗ್ಗಿನಿಂದಲೇ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಅವರ ಹೋಟೆಲ್ ಮುಂದೆ ದೊಡ್ಡದಾಗಿ ಸಾಲುಗಟ್ಟಿ ನಿಂತಿರುವುದನ್ನು ಹಲವಾರು ದೃಶ್ಯವಾಹಿನಿಗಳು ಪ್ರಸಾರ ಮಾಡಿದವು.
ಈ ಕುರಿತು ಮಾಧ್ಯಮಗಳ ವರದಿಗಾರರೊಂದಿಗೆ ಮಾತನಾಡಿದ ಶಿಬು, "ನಾನು ಬೆಳಗ್ಗೆಯೇ ಇಷ್ಟು ದೊಡ್ಡ ಜನಜಂಗುಳಿಯನ್ನು ನಿರೀಕ್ಷಿಸಿರಲಿಲ್ಲ" ಎಂದು ತಿಳಿಸಿದ್ದಾರೆ.
ನೀವು ಇಷ್ಟು ಜನರಿಗೆ ಬಿರಿಯಾನಿ ಹಂಚಲು ಸಾಧ್ಯವೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, "ನಾನು ಉಚಿತ ಬಿರಿಯಾನಿ ಪ್ಲೇಟ್‌ಗಳ ಸಂಖ್ಯೆಯನ್ನು ಇನ್ನು 500ರಷ್ಟು ಹೆಚ್ಚು ಮಾಡಿದ್ದೇನೆ" ಎಂದು ಹೇಳಿದ್ದಾರೆ.
ಉಚಿತ ಬಿರಿಯಾನಿ ಪಡೆಯಲು ನಿಂತಿದ್ದವರ ಸಾಲಿನಲ್ಲಿ ಕಾಂಗ್ರೆಸ್ ಶಾಸಕರಾದ ಶಫಿ ಪರಾಂಬಿಲ್ ಕೂಡಾ ಇದ್ದರು. "ಅರ್ಜೆಂಟೀನಾ ತಂಡದ ಅಭಿಮಾನಿಗಳು ಈ ಗೆಲುವಿಗಾಗಿ ಕಳೆದ 36 ವರ್ಷಗಳಿಂದ ಕಾಯುತ್ತಿದ್ದರು" ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಅವರ ಮಾತನ್ನು ಅನುಮೋದಿಸಿದ ಶಿಬು, ಕಳೆದ ಮೂರು ದಶಕಗಳ ಕಾಯುವಿಕೆ ಅಂತ್ಯಗೊಂಡಿರುವುದರಿಂದ ಬಿರಿಯಾನಿಯನ್ನು ಉಚಿತವಾಗಿ ಹಂಚುವ ಮೂಲಕ ಸಂಭ್ರಮ ಆಚರಿಸುತ್ತಿದ್ದೇನೆ" ಎಂದು ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಉದ್ಯೋಗ ಕೊಡಿಸುವುದಾಗಿ ಕೋಟ್ಯಾಂತರ ರೂ. ಪಡೆದು 'ರೈಲುಗಳನ್ನು ಎಣಿಸುವ' ಕೆಲಸ ಕೊಟ್ಟ ವಂಚಕರು !







