ಶಿವಲಿಂಗೇಗೌಡರನ್ನು ನೊಡಿ ಕಲಿಯಬೇಕು...; ಜೆಡಿಎಸ್ ಶಾಸಕನ ಬಗ್ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ
ಬೆಳಗಾವಿ ಚಳಿಗಾಲದ ಅಧಿವೇಶನ
ಬೆಳಗಾವಿ, ಡಿ. 20: ವಿಧಾನಸಭೆ ಪ್ರಶ್ನೋತ್ತರ ವೇಳೆ ಅರಸೀಕೆರೆ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಸದನದಲ್ಲಿ ಪ್ರಶ್ನೋತ್ತರ ವೇಳೆ ಕೆರೆಗಳಿಗೆ ನೀರು ತುಂಬದಿರುವ ಬಗ್ಗೆ ಪ್ರಸ್ತಾಪಿಸಿದ ಶಾಸಕ ಶಿವಲಿಂಗೇಗೌಡ, ಅರಸೀಕೆರೆ ಕ್ಷೇತ್ರದ ಮೂರು ಕೆರೆಗಳಿಗೆ ಮಾತ್ರ ನೀರು ತುಂಬಿಸಲಾಗಿದೆ. ಅರಸೀಕೆರೆಯವರಾದ ನಾವು ಯಾವ ಕರ್ಮ ಮಾಡಿದ್ದೇವೆ. 42 ಕೆರೆಗೆ ನೀರು ಕೊಡುವ ವಾಗ್ದಾನ ನೀಡಲಾಗಿತ್ತು. ಆದರೆ ನಮ್ಮನ್ನು ಬೇರೆ ಕಡೆಗಳಿಗೆ ನೀರು ಕೊಡಲಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಕ್ಷೇತ್ರಕ್ಕೆ ಯಾವ ಕೆಲಸ ಮಾಡಬೇಕು ಎಂಬುದನ್ನು ಶಿವಲಿಂಗೇಗೌಡರನ್ನು ನೊಡಿ ಕಲಿಯಬೇಕು. ಯಾವ ಯಾವ ಯೋಜನೆಗಳನ್ನು ಹೇಗೆ ಕ್ಷೇತ್ರಕ್ಕೆ ತರಬೇಕು ಎಂದು ನಾನು ಕೂಡಾ ಅವರನ್ನು ನೋಡಿ ಕಲಿತಿರುವುದು. ಯಾವ ಕೆರೆಗೆ ನೀರು ತುಂಬಿಸಲು ಬಿಟ್ಟು ಹೋಗಿದೆ ಅದನ್ನು ಸೇರಿಸೋಣ. ಆದರೆ ಯಾವ ಕರ್ಮ ಮಾಡಿದ್ದೀರಿ ಎಂದಲ್ಲ, ಅರಸೀಕೆರೆಯವರು ಪುಣ್ಯ ಮಾಡಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
'ಎರಡು ಯೋಜನೆಗಳಿಂದ ನಿಮ್ಮ ಕಾಲದಲ್ಲಿ ಕ್ಷೇತ್ರದ ಕೆರೆ ತುಂಬುತ್ತಿದೆ. ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಶಿವಲಿಂಗೇಗೌಡ ಅವರು ಮಾಡ್ತಿದ್ದಾರೆ' ಎಂದು ಹೇಳಿದರು.