ಸಿಆರ್‌ಝೆಡ್ ಮರಳುಗಾರಿಕೆಗೆ ಸಾಂಪ್ರದಾಯಿಕ ಮೀನುಗಾರರ ಆಕ್ಷೇಪ: ಬೀದಿಗಿಳಿದು ಹೋರಾಟದ ಎಚ್ಚರಿಕೆ
ಮಂಗಳೂರು, ಡಿ.20: ನಿಷೇಧದ ಅವಧಿಯಲ್ಲೂ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ಈಗಾಗಲೇ ಸಾಂಪ್ರದಾಯಿಕ ಮೀನುಗಾರರ ಬದುಕು ಅತಂತ್ರವಾಗಿದೆ. ಈ ನಡುವೆ ಜಿಲ್ಲಾಡಳಿತದಿಂದ ಈ ಬಾರಿ ಮತ್ತೆ 200ಕ್ಕೂ ಅಧಿಕ ಮಂದಿಗೆ ಮರಳುಗಾರಿಕೆಗೆ ಪರವಾನಿಗೆ ನೀಡಲು ಮುಂದಾಗಿದ್ದು, ಇದರಿಂದ ಮೀನುಗಾರರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ದ.ಕ. ಜಿಲ್ಲಾ ಸಾಂಪ್ರದಾಯಿಕ ನದಿ ಮೀನುಗಾರರ ಸಂಘ ಹೇಳಿದೆ.
ಸುದ್ದಿಗೋಷ್ಠಿಯಲ್ಲಿಂದು ಸಾಂಪ್ರದಾಯಿಕ ಮೀನುಗಾರರ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಂಘದ ಜತೆ ಕಾರ್ಯದರ್ಶಿ ರಿತೇಶ್ ಡಿಸೋಜಾ, ಮಂಗಳೂರು ತಾಲೂಕಿನ ಫಲ್ಗುಣಿ ಹಾಗೂ ನೇತ್ರಾವತಿ ನದಿ ತೀರದಲ್ಲಿ ಪೂರ್ವಿಕರ ಕಾಲದಿಂದಲೂ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲಾಡಳಿತ ಹೇಳುವಂತೆ ಈ ನದಿಗಳಲ್ಲಿ 17 ಮರಳು ದಿಬ್ಬಗಳನ್ನು ಗುರುತಿಸಲಾಗಿದೆ ಎಂದು ಹೇಳುತ್ತಿರುವುದು ಅವೈಜ್ಞಾನಿಕ ಎಂದರು.
ನೇತ್ರಾವತಿ ಸೇತುವೆಯಿಂದ ಕೂಳೂರುವರೆಗಿನ ನದಿ ಬಾಗದಲ್ಲಿ ಇಂತಹ ಯಾವುದೇ ಮರಳು ದಿಬ್ಬಗಳು ಕಂಡು ಬರುವುದಿಲ್ಲ. ಮರಳು ದಿಬ್ಬಗಳ ಸರ್ವೆ ಕಾರ್ಯ ಅವರಿಗೆ ಬೇಕಾದ ರೀತಿಯಲ್ಲಿ ಮಾಡಲಾಗಿದೆ. ಸಮಿತಿಯಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಸೇರಿಸಿಲ್ಲ. ಕೂಳೂರು ಸೇತುವೆಯ ಮೇಲುಗಡೆ ಹಾಗೂ ನೇತ್ರಾವತಿ ಸೇತುವೆಯ ಮೇಲಿನ ಭಾಗದಲ್ಲಿ ಮರಳುಗಾರಿಕೆ ನಡೆಸಿದರೆ ಮೀನುಗಾರರಿಗೆ ತೊಂದರೆ ಆಗದು. ಈಗಾಗಲೇ ಅಕ್ರಮ ಮರಳುಗಾರಿಕೆಯಿಂದಾಗಿ ನದಿಯಲ್ಲಿ ಪಾಚಿ ಸೃಷ್ಟಿಯಾಗಿ ಮರುವಾಯಿ ಚಿಪ್ಪು, ಕಾಣೆ, ಸಿಗಡಿ, ಏಡಿ, ಬಲ್ಚಟ್ ನಂತಹ ಮೀನುಗಳ ಸಂತತಿ ಇಳಿಮುಖವಾಗಿದೆ ಎಂದರು.
ಮೀನುಗಾರಿಕೆ ಇಲಾಖೆ ಆದೇಶದಂತೆ ನದಿಯಲ್ಲಿ 25 ಅಡಿಗಿಂತ ಹೆಚ್ಚಿನ ಗಾತ್ರದ ದೋಣಿ ಬಳಸುವಂತಿಲ್ಲ. ಆದರೆ ಮರಳುಗಾರಿಕೆಗೆ ಯಾಂತ್ರೀಕೃತ ದೋಣಿ, ಯಂತ್ರಗಳನ್ನು ಬಳಸಲಾಗುತ್ತದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಹಿಂದಿನ ಜಿಲ್ಲಾಧಿಕಾರಿಯ ಅನುಮತಿ ಮೇರೆಗೆ, ಗಣಿ ಇಲಾಖೆಯು ಅಕ್ರಮ ಮರಳುಗಾರಿಕೆಯ 70ಕ್ಕೂ ಅಧಿಕ ಲೋಡ್ ಮರಳು, ನಾಲ್ಕೈದು ಟಿಪ್ಪರ್‌ಗಳನ್ನು ವಶಪಡಿಸುವಲ್ಲಿ ಮೀನುಗಾರರು ಸಹಕರಿಸಿದ್ದಾರೆ ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ಅಬ್ದುಲ್ ತಯ್ಯೂಬ್ ಮಾತನಾಡಿ, ನದಿಯಲ್ಲಿ ಮೀನಿನ ಅಭಾವದಿಂದಾಗಿ ಸಣ್ಣ ದೋಣಿಗಳವರು ಬೇರೆಯವರ ದೋಣಿಯಲ್ಲಿ ಮೀನುಗಾರಿಕೆ ನಡೆಸುವ ಪರಿಸ್ಥಿತಿ ಎದುರಾಗಿದೆ. ಮರಳುಗಾರಿಕೆಯಿಂದ ಮೀನುಗಾರಿಕೆ ನಡೆಸುವ ಮೀನುಗಾರರ ಜೀವಹಾನಿಯಾಗುವ ಸಾಧ್ಯತೆಗಳೇ ಅಧಿಕ. ಹಾಗಾಗಿ ಸಿಆರ್‌ಝೆಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅನುಮತಿ ನೀಡಬಾರದು. ನೀಡಿದ್ದಲ್ಲಿ ಮೀನುಗಾರರು ಬೀದಿಗಿಳಿದು ಹೋರಾಟ ಮಾಡಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾಂಪ್ರದಾಯಿಕ ಮೀನುಗಾರರ ಸಂಘದ ಮುಖಂಡರಾದ ಲೋಕೇಶ್ ಬಿ., ಪ್ರೇಮ್ ಪ್ರಕಾಶ್ ಡಿಸೋಜಾ, ನವೀನ್ ಸಾಲ್ಯಾನ್ ಉಪಸ್ಥಿತರಿದ್ದರು.







