ತಂದೆಯ ಕಣ್ಣೆದುರೇ ಯುವತಿಯ ಅಪಹರಣ; ಘಟನೆ ಸಿಸಿಟಿವಿಯಲ್ಲಿ ಸೆರೆ

ಹೈದರಾಬಾದ್: ತೆಲಂಗಾಣದ ರಾಜಣ್ಣ ಸಿರ್ಸಿಲ್ಲ ಜಿಲ್ಲೆಯ ಮೂಡಪಳ್ಳಿ ಎಂಬ ಗ್ರಾಮದಲ್ಲಿ ಇಂದು ಮುಂಜಾನೆ 18 ವರ್ಷದ ಯುವತಿಯೊಬ್ಬಳನ್ನು ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಆಕೆಯ ತಂದೆಯ ಕಣ್ಣೆದುರೇ ಅಪಹರಿಸಿ ಕಾರೊಂದರಲ್ಲಿ ಎಳೆದೊಯ್ದ ಘಟನೆ ವರದಿಯಾಗಿದ್ದು ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವತಿ ಮತ್ತಾಕೆಯ ತಂದೆ ಗ್ರಾಮದ ದೇವಸ್ಥಾನಕ್ಕೆ ಮುಂಜಾನೆ 5.20 ರ ಸುಮಾರಿಗೆ ತೆರಳಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಕಾರೊಂದಲ್ಲಿ ಬಂದ ಅಪಹರಣಕಾರರು ಯುವತಿಯನ್ನು ಬಲವಂತದಿಂದ ಎಳೆದೊಯ್ದು ಕಾರಿನ ಹಿಂಬದಿಯ ಸೀಟಿಗೆ ದೂಡುವುದು ವೀಡಿಯೋದಲ್ಲಿ ಕಾಣಿಸುತ್ತದೆ.
ಯುವತಿಯ ತಂದೆ ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದರೂ ಅವರು ಆತನನ್ನು ದೂಡಿ ಕಾರಲ್ಲಿ ಪರಾರಿಯಾಗುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಯುವತಿಯ ತಂದೆ ತನ್ನ ದ್ವಿಚಕ್ರ ವಾಹನದಲ್ಲಿ ಅಪಹರಣಕಾರರನ್ನು ಹಿಂಬಾಲಿಸಲು ಯತ್ನಿಸಿದರೂ ವಿಫಲರಾಗಿ ಕೊನೆಗೆ ಪೊಲೀಸ್ ದೂರು ನೀಡಿದ್ದಾರೆ.
ಅಪಹರಣ ಪ್ರಕರಣ ದಾಖಲಿಸಿರುವ ಪೊಲೀಸರು ಯುವತಿಯನ್ನು ಪತ್ತೆಹಚ್ಚಲು ಎರಡು ತಂಡಗಳನ್ನು ರಚಿಸಿದ್ದಾರೆ. ಅದೇ ಗ್ರಾಮದ ಕಟ್ಕೂರಿ ಗ್ಯಾನೇಶ್ವರ್ ಎಂಬಾತ ಈ ಕೃತ್ಯ ಎಸಗಿದ್ದಾನೆಂದು ಯುವತಿಯ ಕುಟುಂಬ ಆರೋಪಿಸಿದೆ. ಈ ಹಿಂದೆ ಯುವತಿಯ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ಪ್ರತಿ ದಿನ ಯುವತಿ ಮತ್ತಾಕೆಯ ತಂದೆ ಗ್ರಾಮದ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಇಂದು ಪೂಜೆ ಮುಗಿಸಿ ವಾಪಸಾಗುತ್ತಿದ್ದಾಗ ಘಟನೆ ನಡೆದಿದೆ. ಅಪಹರಣಕಾರರಲ್ಲಿ ಕತ್ಕೂರಿ ಗ್ಯಾನೇಶ್ವರ್ ಮತ್ತು ಕಟ್ಕೂರಿ ಪ್ರಶಾಂತ್‌ನನ್ನು ಗುರುತಿಸಿದ್ದೇನೆ ಎಂದು ಯುವತಿಯ ತಂದೆ ಹೇಳಿದ್ದಾರೆ.
#Kidnapping of a girl caught on #cctv.
— Surya Reddy (@jsuryareddy) December 20, 2022
A 18 year old Shalini was abducted in front of her father while she was coming out from the temple after performing puja, at Moodapally Village in Chandurthi mandal in #RajannaSircilla dist, at 5.20 am today.#Telangana #Kidnap pic.twitter.com/oow17dxoDB







