'ಮುಜರಾಯಿ ದೇವಸ್ಥಾನಗಳಿಗೆ ‘ಎಲ್ಲ ಜಾತಿಯವರಿಗೂ ಮುಕ್ತ ಪ್ರವೇಶ’ ಬೋರ್ಡ್ ಹಾಕಿಸಿ'
ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಶಿಫಾರಸು
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 20: ‘ಬೇಡ ಜಂಗಮ’ಜಾತಿ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ಅರ್ಜಿದಾರರ ನೈಜತೆ ಪರಿಶೀಲಿಸದೆ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಶಿಫಾರಸು ಮಾಡಿರುವ ಅಧಿಕಾರಿ/ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಮಂಡಲ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.
ಮಂಗಳವಾರ ವಿಧಾನಸಭೆಯಲ್ಲಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಂ.ಪಿ.ಕುಮಾರಸ್ವಾಮಿ ವರದಿಯನ್ನು ಮಂಡಿಸಿದರು. ‘ಎಸ್ಸಿ ಮತ್ತು ಎಸ್ಟಿ ಪಟ್ಟಿಯಲ್ಲಿ ನಮೂದು ಮಾಡಿರುವ ಜಾತಿಗಳನ್ನು ಹೊರತುಪಡಿಸಿ ಇತರೆಯವರಿಗೆ ಅಥವಾ ಪರ್ಯಾಯ ಪದಗಳನ್ನು ಹೊಂದಿರುವ ಜಾತಿಯವರಿಗೆ ಜಾತಿ ಪ್ರಮಾಣ ಪತ್ರ ನೀಡಬಾರದು’ ಎಂದು ಸಮಿತಿ ತಿಳಿಸಿದೆ.
ಮುಜರಾಯಿ ದೇವಸ್ಥಾನಗಳ ಪ್ರವೇಶ ದ್ವಾರದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ದೇವಸ್ಥಾನಗಳಿಗೆ ಎಲ್ಲ ಜಾತಿಯವರಿಗೂ ಮುಕ್ತ ಪ್ರವೇಶವಿರುತ್ತದೆ ಎಂದು ಬೋರ್ಡನ್ನು ಹಾಕಿಸಿ, ಎಲ್ಲ ಜನಾಂಗದವರಿಗೂ ದೇವಸ್ಥಾನದೊಳಗೆ ಪ್ರವೇಶ ನೀಡಲು ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿದೆ.
ಕೋಲಾರ ಜಿಲ್ಲೆಯ ಉಳ್ಳೇರಹಳ್ಳಿಯು ಜಿಲ್ಲೆಗೆ ಸಮೀಪದಲ್ಲಿದ್ದು, ಸದರಿ ಹಳ್ಳಿಯಲ್ಲಿ ವಾಸವಾಗಿರುವ ಪರಿಶಿಷ್ಟ ಕುಟುಂಬದ ಮೇಲೆ ದೌರ್ಜನ್ಯ ಘಟನೆ ನಡೆದು ಎರಡು ವಾರಗಳ ನಂತರ ಈ ಘಟನೆ ಸಾರ್ವಜನಿಕವಾಗಿ ಬೆಳಕಿಗೆ ಬಂದಿರುವುದರಿಂದ ಸ್ಥಳೀಯ ಅಧಿಕಾರಿಗಳ ವೈಫಲ್ಯತೆ ಹಾಗೂ ಪೊಲೀಸರ ನಿರ್ಲಕ್ಷ್ಯತೆ ಎತ್ತಿ ತೋರಿಸುತ್ತಿದ್ದು, ಇದರ ಬಗ್ಗೆ ತನಿಖೆ ಮಾಡಬೇಕೆಂದು ಸಮಿತಿಯು ಸಲಹೆ ನೀಡಿದೆ.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗದವರ ಮೇಲೆ ಅಸ್ಪೃಶ್ಯತೆ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ವಹಿಸಬೇಕು’
- ಎಂ.ಪಿ.ಕುಮಾರಸ್ವಾಮಿ, ವಿಧಾನ ಮಂಡಲ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಅಧ್ಯಕ್ಷ