ಕೋವಿಡ್ ಪ್ರಕರಣಗಳ ಏರಿಕೆ ನಡುವೆ ಚೀನಾದಲ್ಲಿ ನಿಂಬೆಹಣ್ಣಿಗೆ ಭಾರೀ ಬೇಡಿಕೆ

ಬೀಜಿಂಗ್: ಚೀನಾದಲ್ಲಿ ಕೋವಿಡ್ (Covid) ಪ್ರಕರಣಗಳಲ್ಲಿ ಭಾರೀ ಏರಿಕೆ ಹಾಗೂ ಫಾರ್ಮಸಿಗಳಲ್ಲಿ ಔಷಧಿಗಳ ಕೊರತೆಯ ನಡುವೆ ಜನರು ನೈಸರ್ಗಿಕ ಪರಿಹಾರಗಳಿಗೆ ಮೊರೆಹೋಗುತ್ತಿದ್ದಾರೆಂಬುದಕ್ಕೆ ಅಲ್ಲಿ ನಿಂಬೆಹಣ್ಣಿಗೆ (Lemons) ದಿಢೀರನೆ ಹೆಚ್ಚಾಗಿರುವ ಬೇಡಿಕೆಯೇ ಪುರಾವೆಯಾಗಿದೆ ಎಂದು Bloomberg ವರದಿ ಮಾಡಿದೆ.
ದೇಶದಲ್ಲಿ ನಿಂಬೆಹಣ್ಣು ಬೆಳೆಗಾರರಲ್ಲಿ ಈ ಬೆಳವಣಿಗೆ ಸಂತಸ ಮೂಡಿಸಿದ್ದು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಿಂಬೆ ಬೆಳೆಗಾರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಬೇಡಿಕೆ ಹೆಚ್ಚಾದಂತೆ ನಿಂಬೆಹಣ್ಣಿನ ಬೆಲೆಯೂ ಹೆಚ್ಚಾಗಿದೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ದೇಶದಲ್ಲಿ ಬೆಳೆಸಲಾಗುವ ಒಟ್ಟು ನಿಂಬೆಹಣ್ಣುಗಳ ಪೈಕಿ ಶೇ. 70 ರಷ್ಟು ನಿಂಬೆಹಣ್ಣುಗಳನ್ನು ಬೆಳೆಸಲಾಗುತ್ತದೆ. ಈ ಹಿಂದೆ ಇಲ್ಲಿನ ಬೆಳೆಗಾರರು ದಿನವೊಂದಕ್ಕೆ 5 ರಿಂದ 6 ಟನ್ ನಿಂಬೆಹಣ್ಣು ಮಾರಾಟ ಮಾಡುತ್ತಿದ್ದರೆ ಈಗ 20 ರಿಂದ 30 ಟನ್ ಮಾರಾಟ ಮಾಡುತ್ತಿದ್ದಾರೆ.
ಪ್ರಮುಖವಾಗಿ ಬೀಜಿಂಗ್ ಮತ್ತು ಶಾಂಘೈ ನಗರಗಳ ಜನರು ವಿಟಮಿನ್ ಸಿ ಇಂದ ಸಮೃದ್ಧವಾದ ಆಹಾರಕ್ಕೆ ಮೊರೆ ಹೋಗಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಶ್ರಮಿಸುತ್ತಿರುವುದರಿಂದ ನಿಂಬೆಹಣ್ಣು, ಜೊತೆಗೆ ಕಿತ್ತಳೆಹಣ್ಣು, ಪಿಯರ್ಸ್ ಮುಂತಾದ ಹಣ್ಣುಗಳ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಆದರೆ ಈ ಹಣ್ಣುಗಳು ಕೋವಿಡ್ ಚಿಕಿತ್ಸೆಯಲ್ಲಿ ಸಹಕಾರಿ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳು ಇನ್ನೂ ಲಭ್ಯವಿಲ್ಲ.
ಇದನ್ನೂ ಓದಿ: ಚೀನಾದಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳು; ಜಗತ್ತಿನೆಲ್ಲೆಡೆ ಆತಂಕ