ಸಚಿವ ನಿರಾಣಿ ಮಾತಿಗೆ ಅವಕಾಶ ನೀಡುವಂತೆ ಸದನದ ಬಾವಿಗಿಳಿದು ಪಟ್ಟು ಹಿಡಿದ ವಿಪಕ್ಷ ಸದಸ್ಯರು
ಪರಿಷತ್ನಲ್ಲಿ ಪ್ರತಿಧ್ವನಿಸಿದ ಕಬ್ಬಿನ ತೂಕದಲ್ಲಿ ವಂಚನೆ ವಿಚಾರ

ಬೆಳಗಾವಿ, (ಸುವರ್ಣಸೌಧ) ಡಿ.20: ಕಬ್ಬಿನ ತೂಕದಲ್ಲಿ ಕೈಗಾರಿಕಾ ಮಾಲಕರು ಮಾಡುತ್ತಿರುವ ಮೋಸದ ಕುರಿತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೆ ಉತ್ತರಿಸಲು ಅವಕಾಶ ನೀಡುವಂತೆ ವಿಪಕ್ಷ ಸದಸ್ಯರು ವಿಧಾನ ಪರಿಷತ್ ನಲ್ಲಿ ಸದನದ ಬಾವಿಗೆ ಇಳಿದು ಗದ್ದಲ ಎಬ್ಬಿಸಿದರು.
ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರಾದ ಪ್ರಕಾಶ್ ರಾಥೋಡ್, ಪಿ.ಆರ್.ರಮೇಶ್ ಸದನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಧ್ವನಿಗೂಡಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, ಕಬ್ಬು ಕಾರ್ಖಾನೆಯ ಮಾಲಕರು ಬಡವರ ರಕ್ತ ಹೀರುತ್ತಾರೆ. ಅದರಲ್ಲೂ ತೂಕದ ವಿಚಾರದಲ್ಲಿ ಟನ್ ಗಟ್ಟಲೆ ವಂಚನೆ ಮಾಡುತ್ತಿರುವ ತಾಜಾ ಉದಾಹರಣೆಗಳೇ ಇದೆ ಎಂದರು.
ಇದಕ್ಕೆ ಎದ್ದು ನಿಂತು ವಿವರಣೆ ನೀಡಲು ಮುಂದಾದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೆ ವಿಷಯ ಪ್ರಸ್ತಾಪಿಸಲು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ನಿರಾಕರಿಸಿದರು.ಆದರೂ, ನಿರಾಣಿ ಮಾತನಾಡಲು ಮುಂದಾದ ವೇಳೆ ಏರು ಧ್ವನಿಯಲ್ಲಿಯೇ ಕೂರುವಂತೆ ಸೂಚಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್ ಮರಿತಿಮ್ಮೇಗೌಡ ಅವರು, ಇದೊಂದು ಸಂವಿಧಾನ ವಿರೋಧಿ ನಡೆ. ಸಚಿವ ನಿರಾಣಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಬಳಿಕ, ವಿಪಕ್ಷ ನಾಯಕ ಹರಿಪ್ರಸಾದ್, ಪ್ರಕಾಶ್ ರಾಥೋಡ್, ಸಲೀಂ ಅಹ್ಮದ್ ಹಲವು ಸದಸ್ಯರು ಅವಕಾಶ ನೀಡುವಂತೆ ಕೋರಿದರು.
ಪ್ರಶ್ನೋತ್ತರ ವೇಳೆ ಹೀಗೆ ಮಾಡಲು ಸಾಧ್ಯವಿಲ್ಲ ಎಂದು ಸಭಾಪತಿ ಉತ್ತರಿಸಿದಾಗ ಯು.ಬಿ.ವೆಂಕಟೇಶ್ ಸೇರಿದಂತೆ ಹಲವರು ಸದಸ್ಯರು ಬಾವಿಗೆ ಇಳಿದು, ಗದ್ದಲ ಎಬ್ಬಿಸಿದರು. ಆನಂತರ ಸಭಾಪತಿ, ಸರಿ ಅವಕಾಶ ನೀಡಲಾಗುವುದು ಎಂದ ಬಳಿಕ ಬಾವಿಯಿಂದ ಹೊರಬಂದರು.







