ಇನ್ಸ್ಟಾಗ್ರಾಮ್ ಮೊಟ್ಟೆ ಪೋಸ್ಟ್‌ಗೆ ಸಿಕ್ಕಿದ್ದ ಲೈಕ್ ಗಳನ್ನು ಹಿಂದಿಕ್ಕಿ ದಾಖಲೆ ಬರೆದ ಲಿಯೊನೆಲ್ ಮೆಸ್ಸಿ ಪೋಸ್ಟ್!

ಬ್ಯೂನಸ್ ಐರಿಸ್: ದೋಹಾದ ಲುಸೈಲ್ ಕ್ರೀಡಾಂಗಣದಲ್ಲಿ ಲಿಯೊನೆಲ್ ಮೆಸ್ಸಿ ವಿಶ್ವಕಪ್ ಟ್ರೋಪಿಯನ್ನು ಎತ್ತಿ ಹಿಡಿದು 48 ಗಂಟೆಗಳೇ ಕಳೆದಿದ್ದು, ಪ್ರಶಸ್ತಿ ಜಯಿಸಿದ ನಂತರ ಮೆಸ್ಸಿ ಇನ್ಸ್ಟಾಗ್ರಾಮ್‌ನಲ್ಲಿ ಹೃದಯಪೂರ್ವಕವಾಗಿ ಬರೆದಿರುವ ಟಿಪ್ಪಣಿಯೊಂದಕ್ಕೆ ಇನ್ಸ್ಟಾಗ್ರಾಮ್ ಇತಿಹಾಸದಲ್ಲೇ ಅತಿ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿ ದಾಖಲೆ ನಿರ್ಮಿಸಿದೆ.
ಇನ್ಸ್ಟಾಗ್ರಾಮ್ ಇತಿಹಾಸದಲ್ಲೇ ಮೊಟ್ಟೆ ಕುರಿತ ಪೋಸ್ಟ್‌ಗೆ ಅತಿ ಹೆಚ್ಚು (5 ಕೋಟಿಗೂ ಹೆಚ್ಚು)ಲೈಕ್ ಗೆಗಳು ವ್ಯಕ್ತವಾಗಿದ್ದವು. ಆದರೆ, ವಿಶ್ವಕಪ್ ಗೆಲುವಿನ ಕುರಿತು ಮೆಸ್ಸಿ ಬರೆದಿರುವ ಟಿಪ್ಪಣಿ ಆ ದಾಖಲೆಯನ್ನು ಅಳಿಸಿ ಹಾಕಿದ್ದು, ಅದಕ್ಕೆ 6 ಕೊಟಿಗೂ ಅಧಿಕ ಲೈಕ್ ಗೆಗಳು ಬಂದಿವೆ.
ಕ್ರೀಡಾಪಟುಗಳ ಪೈಕಿ ಮೆಸ್ಸಿ ತನ್ನ ಪ್ರತಿಸ್ಪರ್ಧಿ ಕ್ರಿಸ್ಟಿಯಾನೊ ರೊನಾಲ್ಡೊ ಜೊತೆಗೂಡಿ ಚೆಸ್ ಪಂದ್ಯ ಆಡುತ್ತಿರುವ ಚಿತ್ರದ ಪೋಸ್ಟ್‌ಗೇ ಹೆಚ್ಚು ಮೆಚ್ಚುಗೆಗಳು ಬಂದಿದ್ದವು. ಈ ಚಿತ್ರವನ್ನು 41 ದಶಲಕ್ಷ ಮೆಚ್ಚಿಕೊಂಡಿದ್ದರು. ಆ ಚಿತ್ರವನ್ನು ಜವಳಿ ಸಂಸ್ಥೆಯೊಂದರ ಜಾಹೀರಾತು ಅಭಿಯಾನದ ಭಾಗವಾಗಿ ತೆಗೆಯಲಾಗಿತ್ತಾದರೂ, ಮೈದಾನದ ಹೊರಗೆ ಈ ಇಬ್ಬರನ್ನೂ ಒಟ್ಟಿಗೆ ಜೊತೆಗೂಡಿಸಿದ್ದ ಅಪರೂಪದ ಚಿತ್ರ ಅದಾಗಿತ್ತು.
ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದ ಕೆಲ ಗಂಟೆಗಳ ನಂತರ ಚಿತ್ರಗಳ ಸರಣಿಯೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಲಿಯೊನೆಲ್ ಮೆಸ್ಸಿ, ಅದರ ಅಡಿಯಲ್ಲಿ ಸುಂದರವಾದ ಟಿಪ್ಪಣಿಯೊಂದನ್ನು ಬರೆದಿದ್ದರು. ಆ ಟಿಪ್ಪಣಿಯಲ್ಲಿ ತನಗೆ ಬೆಂಬಲಿಸಿದ ಕುಟುಂಬ ಹಾಗೂ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದರು.
"ನನಗೆ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ ಮತ್ತು ಎಲ್ಲ ಬೆಂಬಲಿಗರಿಗೆ ಹಾಗೂ ನಮ್ಮಲ್ಲಿ ವಿಶ್ವಾಸವಿರಿಸಿದ್ದ ಎಲ್ಲರಿಗೂ ಧನ್ಯವಾದ" ಎಂದು ಅವರು ಬರೆದುಕೊಂಡಿದ್ದಾರೆ. ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ತನ್ನ ತಂಡಕ್ಕೆ ಅರ್ಪಿಸಿರುವ ಅವರು, "ಈ ಗುಂಪಿನ ಅರ್ಹತೆ ವ್ಯಕ್ತಿಗಳನ್ನು ಮೀರಿದ್ದು. ಒಂದೇ ಕನಸಿಗಾಗಿ ಹೋರಾಡಿದ ಪ್ರತಿಯೊಬ್ಬರ ಸಾಮರ್ಥ್ಯವದು ಮತ್ತು ಎಲ್ಲ ಅರ್ಜೆಂಟೀನಾ ಪ್ರಜೆಗಳ ಕನಸೂ ಅದೇ ಆಗಿತ್ತು" ಎಂದಿದ್ದಾರೆ.