ಜನವರಿ ಮೊದಲ ವಾರ ಕಾಂಗ್ರೆಸ್‌ನ ಪ್ರಥಮ ಅಭ್ಯರ್ಥಿ ಪಟ್ಟಿ ಪ್ರಕಟ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಥಮ ಹಂತದ ಪಟ್ಟಿ ಜನವರಿ ತಿಂಗಳ ಮೊದಲ ವಾರದಲ್ಲಿ ಪ್ರಕಟಗೊಳ್ಳಲಿದ್ದು, ಎರಡನೇ ವಾರದಲ್ಲಿ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಆರ್. ಧ್ರುವನಾರಾಯಣ್ ತಿಳಿಸಿದ್ದಾರೆ.
ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿರುವ ಅವರು ಕ್ಷೇತ್ರವಾರು ಪಕ್ಷದ ಸಂಘಟನೆಯ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡುತಿದ್ದರು.
ತಾನು ಹಾಗೂ ಎಐಸಿಸಿ ಕಾರ್ಯದರ್ಶಿ ಮತ್ತು ಮೈಸೂರು ವಿಭಾಗದ ಪಕ್ಷದ ಉಸ್ತುವಾರಿಯಾಗಿರುವ ರೋಝಿ ಜಾನ್ ಅವರೊಂದಿಗೆ ಎರಡು ದಿನ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಅಲ್ಲಿ ಪಕ್ಷ ಸಂಘಟನೆ ಕುರಿತಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿದ್ದಾಗಿ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ, ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದು, ತಾನು ಕೊಟ್ಟ ಯಾವುದೇ ಆಶ್ವಾಸನೆಯನ್ನು ಈಡೇರಿಸಲು ಅದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅದು ಕಾಂಗ್ರೆಸ್ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಮತದಾರರ ಹೆಸರುಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಮತಪಟ್ಟಿಯಿಂದ ತೆಗೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಅವರು ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಇದರಿಂದಾಗಿ ಇಬ್ಬರು ಐಎಎಸ್ ಅಧಿಕಾರಿಗಳ ವಜಾ ಹಾಗೂ ಕೆಲವರ ಬಂಧನವಾಗಿದೆ. ಇದು ಬಿಜೆಪಿಯ ಹುನ್ನಾರವನ್ನು ಬಯಲುಗೊಳಿಸುತ್ತದೆ ಎಂದರು.
ಈ ಬಗ್ಗೆ ನಿಗಾ ವಹಿಸಲು ಪಕ್ಷದ ಪ್ರಮುಖರನ್ನು ನೇಮಕಗೊಳಿಸಿದೆ. ಬೈಂದೂರಿಗೆ ಗೋಪಾಲ ಪೂಜಾರಿ, ಉಡುಪಿ ಮತ್ತು ಕುಂದಾಪುರಕ್ಕೆ ಮಂಜುನಾಥ ಭಂಡಾರಿ, ಕಾಪುವಿಗೆ ವಿನಯಕುಮಾರ್ ಸೊರಕೆ, ಕಾರ್ಕಳಕ್ಕೆ ಮಮತಾ ಗಟ್ಟಿ ಅವರನ್ನು ಬಿಎಲ್‌ಎ1 ಆಗಿ ನೇಮಿಸಲಾಗಿದೆ. ಇವರಿಗೆ ಬಿಎಲ್‌ಎ2 ನೇಮಕ ಮಾಡಲು ಅಧಿಕಾರವಿದೆ. ಇವರಿಗೆ ನಾನು ಹಾಗೂ ಜಾನ್ ಮಾರ್ಗದರ್ಶನ ನೀಡಲಿದ್ದೇವೆ. ಈ ಮೂಲಕ ವಾಮಮಾರ್ಗದ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಬಿಜೆಪಿ ಪ್ರಯತ್ನವನ್ನು ನಾವು ವಿರೋಧಿಸಲಿದ್ದೇವೆ ಎಂದು ಧ್ರುವನಾರಾಯಣ್ ತಿಳಿಸಿದರು.
ಉಡುಪಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಟ್ಟು 18 ನಾಮಪತ್ರಗಳು ಬಂದಿದ್ದು, ಬೈಂದೂರಿನಲ್ಲಿ 1, ಕಾಪುವಿನಲ್ಲಿ 2, ಉಡುಪಿಯಲ್ಲಿ 7, ಕುಂದಾಪುರದಲ್ಲಿ 4 ಅರ್ಜಿಗಳು ಸಲ್ಲಿಕೆಯಾಗಿವೆ. ಚುನಾವಣಾ ಸಮಿತಿ ಈ ಅರ್ಜಿಗಳನ್ನು ಪರಿಶೀಲಿಸಲಿವೆ ಎಂದರು.
ಮುಂದಿನ ಜ.9ರಿಂದ ಡಿಕೆಶಿ ಹಾಗೂ ಸಿದ್ಧರಾಮಯ್ಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಂಟಿಯಾಗಿ ಬಸ್‌ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಮುಗಿದ ಬಳಿಕ ಎರಡು ತಂಡಗಳಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇವರು ಪ್ರವಾಸ ಕೈಗೊಂಡು ಪಕ್ಷದ ಪ್ರಚಾರ ನಡೆಸಲಿದ್ದಾರೆ. ಬೆಳಗಾವಿಯಿಂದಲೇ ಇವರಿಬ್ಬರ ಪ್ರವಾಸ ಪ್ರಾರಂಭಗೊಳ್ಳಲಿದೆ ಎಂದು ಕಾರ್ಯಧ್ಯಕ್ಷರು ತಿಳಿಸಿದರು.
ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಹಾಗೂ ವಿಶ್ವನಾಥ್ ಇವರ ಹೇಳಿಕೆ ಬಿಜೆಪಿ ಪಕ್ಷದಲ್ಲಿರುವ ಭ್ರಷ್ಟಾಚಾರಕ್ಕೆ ಬಹಿರಂಗ ನಿದರ್ಶನ. ಈ ಬಗ್ಗೆ ಕೂಡಲೇ ತನಿಖೆಯಾಗಬೇಕು.ಈಗ ಇಡಿ, ಐಟಿ ಸಂಸ್ಥೆಗಳ ಎಲ್ಲಿವೆ ಎಂದವರು ಪ್ರಶ್ನಿಸಿದರು.
ವಿಶ್ವನಾಥ್ ಅವರ ಕಾಂಗ್ರೆಸ್ ಸೇರ್ಪಡೆ ಪ್ರಯತ್ನದ ಬಗ್ಗೆ ಪ್ರಶ್ನಿಸಿದಾಗ, ಅವರಿನ್ನೂ ಪಕ್ಷಕ್ಕೆ ಸೇರುವ ಇಚ್ಛೆ ವ್ಯಕ್ತಪಿಡಿಸಿ ಅರ್ಜಿ ಹಾಕಿಲ್ಲ. ಅರ್ಜಿ ಹಾಕಿದಾಗ ನಮ್ಮ ಸಮಿತಿ ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದೆ ಎಂದರು.
ರೋಝಿ ಜಾನ್ ಮಾತನಾಡಿ, ಬಿಜೆಪಿಯ ಭ್ರಷ್ಟಾಚಾರದಿಂದ ಮತದಾರರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ 40 ಪರ್ಸೆಂಟ್ ಸರಕಾರವನ್ನು ಬದಲಿಸಲು ಮತದಾರರು ಕಾಯುತಿದ್ದಾರೆ.ಮುಂದಿನ ಚುನಾವಣೆಗೆ ಪಕ್ಷ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕುಮಾರ್ ಕೊಡವೂರು, ಮಾಜಿ ಸಚಿವ ವಿನಯಕುಮಾರ್ ಸೊರಕೆ, ನಾಯಕರಾದ ಅಣ್ಣಯ್ಯ ಶೇರಿಗಾರ್, ಹಬೀಬ್ ಅಲಿ, ಭಾಸ್ಕರರಾವ್ ಕೊಡವೂರು, ಹರೀಶ್ ಶೆಟ್ಟಿ ಪಾಂಗಾಳ ಉಪಸ್ಥಿತ ರಿದ್ದರು.







