ಮಾವೋವಾದಿಗಳಿಂದ ಯುವತಿಯರ ನೇಮಕಾತಿ: ಎನ್‌ಐಎಯಿಂದ ದೋಷಾರೋಪ ಪಟ್ಟಿ ಸಲ್ಲಿಕೆ

ಹೊಸದಿಲ್ಲಿ,ಡಿ.20: ಯುವತಿಯರಿಗೆ ಉಗ್ರವಾದವನ್ನು ಬೋಧಿಸಿ ಅವರನ್ನು ತಮ್ಮ ಬಂಡುಕೋರ ಗುಂಪಿಗೆ ಸೇರಿಸಿಕೊಂಡ ಆರೋಪದಲ್ಲಿ ಐವರು ಮಾವೋವಾದಿಗಳ ವಿರುದ್ಧ ಆಂಧ್ರಪ್ರದೇಶ(Andhra Pradesh)ದ ವಿಜಯವಾಡಾದ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು ತಿಳಿಸಿದೆ.
ಮಾವೋವಾದಿಗಳಿಂದ ಯುವತಿಯರ ನೇಮಕ ಪ್ರಕರಣದ ತನಿಖೆಯನ್ನು ಎನ್‌ಐಎ ಈ ವರ್ಷದ ಜೂನ್‌ನಲ್ಲಿ ತನ್ನ ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ಆರಂಭಿಕ ತನಿಖೆಯನ್ನು ವಿಶಾಖಪಟ್ಟಣಂ ಪೊಲೀಸರು ನಡೆಸಿದ್ದರು.
ಸಿಪಿಐ (ಮಾವೋವಾದಿ) ಸದಸ್ಯೆಯನ್ನಾಗಿ ರಾಧಾ (Radha)ಎಂಬ ಯುವತಿಯ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.
ಭೂಗತ ಮಾವೋವಾದಿಗಳಾದ ಅಕ್ಕಿರಾಜು ಹರಗೋಪಾಲ (Akkiraju Haragopala)ಅಲಿಯಾಸ್ ಆರ್‌ಕೆ (ಅಕ್ಟೋಬರ್ 2021ರಲ್ಲಿ ಮೃತಪಟ್ಟಿದ್ದಾನೆ),ಉದಯ,ಅರುಣಾ ಮತ್ತಿತರರ ನಾಯಕತ್ವದಡಿ ಆರೋಪಿಗಳಾದ ಡೋಂಗರಿ ದೇವೇಂದ್ರ,ದುಬಾಸಿ ಸ್ವಪ್ನಾ ಮತ್ತು ಚುಕ್ಕಾ ಶಿಲ್ಪಾ ಅವರು ಚೈತನ್ಯ ಮಹಿಳಾ ಸಂಘಂ (ಸಿಎಂಎಸ್) ಹೆಸರಿನ ದತ್ತಿ ಸಂಸ್ಥೆಗೆ ಸೇರುವಂತೆ ರಾಧಾಳನ್ನು ಪ್ರೇರೇಪಿಸಿದ್ದರು ಮತ್ತು ನಂತರ ಆಕೆಗೆ ಉಗ್ರವಾದವನ್ನು ಬೋಧಿಸಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯಲ್ಲಿ ಭರ್ತಿ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.
ಈ ಮೂವರು ಆರೋಪಿಗಳು ಅಮಾಯಕ ಯುವತಿಯರನ್ನು ಸಾಮಾಜಿಕ ಕಾರ್ಯದ ಸೋಗಿನಲ್ಲಿ ಸಿಎಂಎಸ್‌ಗೆ ಸೇರಿಸುತ್ತಿದ್ದರು ಮತ್ತು ಬಳಿಕ ಅವರನ್ನು ಸಿಪಿಐ (ಮಾವೋವಾದಿ) ಸಂಘಟನೆಗೆ ಭರ್ತಿ ಮಾಡಿಕೊಳ್ಳುತ್ತಿದ್ದರು ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಎನ್‌ಐಎ ಹೇಳಿದೆ.
ಎನ್‌ಐಎ ಅಸ್ಸಾಂ,ಜಾರ್ಖಂಡ್ ಮತ್ತು ಛತ್ತೀಸ್‌ಗಡಗಳಲ್ಲಿ ಮಾವೋವಾದಿಗಳ ಚಟುವಟಿಕೆಗಳಿಗೆ ಸಂಬಂಧಿಸಿದ ಇತರ ಆರು ಪ್ರಕರಣಗಳ ಬಗ್ಗೆಯೂ ತನಿಖೆಯನ್ನು ನಡೆಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ನಕ್ಸಲ್ ಹಿಂಸಾಚಾರ ಇಳಿಕೆ :ಈ ನಡುವೆ,ಮಾವೋವಾದಿ ಹಿಂಸಾಚಾರದ ಘಟನೆಗಳಲ್ಲಿ ಶೇ.77ರಷ್ಟು ಇಳಿಕೆಯಾಗಿದ್ದು,2010ರಲ್ಲಿ 2,213ರಷ್ಟಿದ್ದ ಇಂತಹ ಘಟನೆಗಳ ಸಂಖ್ಯೆ 2021ರಲ್ಲಿ 509ಕ್ಕೆ ತಗ್ಗಿದೆ ಎಂದು ಕೇಂದ್ರ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
ಇದೇ ರೀತಿ 2010ರಲ್ಲಿ 1,005ರಷ್ಟಿದ್ದ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಗಳ ಸಾವುಗಳ ಸಂಖ್ಯೆ 2021ರಲ್ಲಿ 147ಕ್ಕೆ ತಗ್ಗಿದ್ದು,ಶೇ.85ರಷ್ಟು ಇಳಿಕೆಯಾಗಿದೆ ಎಂದರು.
ಮಾವೋವಾದಿ ಹಿಂಸಾಚಾರದ ಭೌಗೋಳಿಕ ಹರಡುವಿಕೆಯೂ ಗಣನೀಯವಾಗಿ ಕಡಿಮೆಯಾಗಿದೆ. 2010ರಲ್ಲಿ 96 ನಕ್ಸಲ್‌ಪೀಡಿತ ಜಿಲ್ಲೆಗಳ 465 ಪೋಲಿಸ್ ಠಾಣೆಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿದ್ದರೆ 2021ರಲ್ಲಿ 46 ಜಿಲ್ಲೆಗಳಲ್ಲಿಯ ಕೇವಲ 191 ಪೊಲೀಸ್ ಠಾಣೆಗಳಿಗೆ ಸೀಮಿತಗೊಂಡಿವೆ. ಇದರ ಪರಿಣಾಮವಾಗಿ ಭದ್ರತಾ ಸಂಬಂಧಿತ ವೆಚ್ಚ (ಎಸ್‌ಆರ್‌ಇ) ಯೋಜನೆಯಡಿ ಜಿಲ್ಲೆಗಳ ಸಂಖ್ಯೆಯೂ ಇಳಿಕೆಯಾಗಿದೆ. ಇಂತಹ ಜಿಲ್ಲೆಗಳ ಸಂಖ್ಯೆ 126ರಿಂದ 2018 ಎಪ್ರಿಲ್‌ನಲ್ಲಿ 90ಕ್ಕೆ ಮತ್ತು 2021 ಜುಲೈನಲ್ಲಿ 70ಕ್ಕೆ ತಗ್ಗಿದೆ. ಇದೇ ರೀತಿ 2018ರಲ್ಲಿ 35ರಷ್ಟಿದ್ದ ನಕ್ಸಲ್‌ಪೀಡಿತ ಜಿಲ್ಲೆಗಳ ಸಂಖ್ಯೆ 2021ರಲ್ಲಿ 25ಕ್ಕೆ ಇಳಿಕೆಯಾಗಿದೆ ಎಂದೂ ರಾಯ್ ತಿಳಿಸಿದರು.







