ಸ್ಮತಿ ಇರಾನಿ ವಿರುದ್ಧ ‘ಸ್ತ್ರೀದ್ವೇಷಿ’ ಹೇಳಿಕೆಗಾಗಿ ಕಾಂಗ್ರೆಸ್ ನಾಯಕನಿಗೆ ಎನ್‌ಸಿಡಬ್ಲ್ಯು ಸಮನ್ಸ್

ಹೊಸದಿಲ್ಲಿ,ಡಿ.20: ರಾಷ್ಟ್ರೀಯ ಮಹಿಳಾ ಆಯೋಗ (NCW)ವು ಕೇಂದ್ರ ಸಚಿವೆ ಸ್ಮತಿ ಇರಾನಿ(Smati Irani)ಯವರ ವಿರುದ್ಧ ಸ್ತ್ರೀದ್ವೇಷಿ ಮತ್ತು ಅವಮಾನಕಾರಿ ಹೇಳಿಕೆಗಾಗಿ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಅಜಯ ರಾಯ್(Ajay Roy) ಅವರಿಗೆ ಮಂಗಳವಾರ ಸಮನ್ಸ್ ಹೊರಡಿಸಿದ್ದು,ಡಿ.28ರಂದು ತನ್ನೆದುರು ಹಾಜರಾಗುವಂತೆ ಸೂಚಿಸಿದೆ.
ಇರಾನಿ ಕೇವಲ ವೈಯಾರ ಪ್ರದರ್ಶನಕ್ಕೆ ತನ್ನ ಲೋಕಸಭಾ ಕ್ಷೇತ್ರ ಅಮೇಥಿಗೆ ಬರುತ್ತಾರೆ ಎಂದು ರಾಯ್ ಸೋಮವಾರ ಟೀಕಿಸಿದ್ದು,ಇದಕ್ಕೆ ಬಿಜೆಪಿ(BJP) ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.
2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ (Rahul Gandhi)ಅಮೇಥಿಯಿಂದ ಸ್ಪರ್ಧಿಸಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ರಾಯ್,ಅದು ಗಾಂಧಿ ಕುಟುಂಬದ ಕ್ಷೇತ್ರವಾಗಿದೆ. ರಾಹುಲ್ ಅಲ್ಲಿಂದ ಲೋಕಸಭಾ ಸಂಸದರಾಗಿದ್ದರು. ರಾಜೀವ ಗಾಂಧಿ (Rajiv Gandhi)ಮತ್ತು ಸಂಜಯ ಗಾಂಧಿ (Sanjay Gandhi)ಅವರೂ ಆ ಕ್ಷೇತ್ರದಿಂದ ಗೆದ್ದು ಸೇವೆ ಸಲ್ಲಿಸಿದ್ದರು ಎಂದು ಉತ್ತರಿಸಿದ್ದರು.
ಅಮೇಥಿಯಲ್ಲಿನ ಹೆಚ್ಚಿನ ಫ್ಯಾಕ್ಟರಿಗಳು ಮುಚ್ಚುವ ಹಂತದಲ್ಲಿವೆ. ಜಗದೀಶಪುರ ಕೈಗಾರಿಕಾ ಪ್ರದೇಶದಲ್ಲಿನ ಅರ್ಧದಷ್ಟು ಫ್ಯಾಕ್ಟರಿಗಳು ಬಾಗಿಲೆಳೆದುಕೊಂಡಿವೆ. ಇರಾನಿ ಬರುತ್ತಾರೆ,ಕೇವಲ ತನ್ನ ವೈಯಾರವನ್ನು ತೋರಿಸಿ ವಾಪಸಾಗುತ್ತಾರೆ ಎಂದು ರಾಯ್ ಹೇಳಿದ್ದರು.







