ಪ್ರಾಧ್ಯಾಪಕರ ನೇಮಕಾತಿಯಲ್ಲಿ ಮೀಸಲಾತಿ ನೀತಿಯನ್ನು ಪಾಲಿಸಿ:ಕೇಂದ್ರ,ಐಐಟಿಗಳಿಗೆ ಸುಪ್ರೀಂ ಕೋಟ್೯ ನಿರ್ದೇಶನ

ಹೊಸದಿಲ್ಲಿ,ಡಿ.20: ಐಐಟಿ(IIT)ಗಳಲ್ಲಿ ಸಂಶೋಧನಾ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಮತ್ತು ಪ್ರಾಧ್ಯಾಪಕರ ನೇಮಕಾತಿಗಾಗಿ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಬೋಧಕ ವೃಂದದಲ್ಲಿ ಮೀಸಲಾತಿ) ಕಾಯ್ದೆ,2019ರಲ್ಲಿಯ ಮೀಸಲಾತಿ ನೀತಿಯನ್ನು ಅನುಸರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಸರ್ವೋಚ್ಚ ನ್ಯಾಯಾಲಯವು ಸಂಶೋಧನಾ ಕಾರ್ಯಕ್ರಮಗಳು ಮತ್ತು ಪ್ರಾಧ್ಯಾಪಕರ ನೇಮಕಾತಿಗಳಿಗೆ ಸಂಬಂಧಿಸಿದಂತೆ ಮೀಸಲಾತಿ ನೀತಿಯನ್ನು ಅನುಸರಿಸಲು ಕೇಂದ್ರ ಮತ್ತು ಐಐಟಿಗಳಿಗೆ ನಿರ್ದೇಶನ ಕೋರಿ ಎಸ್.ಎನ್.ಪಾಂಡೆ (S.N Pandey)ಎನ್ನುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಆರ್.ಶಾ(M.R. Shah) ಮತ್ತು ಸಿ.ಟಿ.ರವಿಕುಮಾರ(C.T Ravikumar) ಅವರ ಪೀಠವು ಕೈಗೆತ್ತಿಕೊಂಡಿತ್ತು. ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದೂ ಪಾಂಡೆ ಆರೋಪಿಸಿದ್ದಾರೆ.
ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಬೋಧಕ ವೃಂದದಲ್ಲಿ ಮೀಸಲಾತಿ) ಕಾಯ್ದೆಯು ಐಐಟಿಗಳು ಸೇರಿದಂತೆ ಎಲ್ಲ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಹುದ್ದೆಗಳಿಗೆ ಎಸ್‌ಸಿ/ಎಸ್‌ಟಿ,ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಆರ್ಥಿಕ ದುರ್ಬಲ ವರ್ಗ (ಇಡಬ್ಲುಎಸ್)ಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿಗಳನ್ನು ಒದಗಿಸಿದೆ.
ಸಂಶೋಧನಾ ಕಾರ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಕಿರುಕುಳದ ದೂರುಗಳನ್ನು ಇತ್ಯರ್ಥಗೊಳಿಸಲು ಕಾರ್ಯವಿಧಾನವೊಂದನ್ನು ರೂಪಿಸುವಂತೆ ಮತ್ತು ಹಾಲಿ ಬೋಧಕ ವೃಂದದ ಕಾರ್ಯ ನಿರ್ವಹಣೆಯ ಪುನರ್‌ಪರಿಶೀಲನೆಗಾಗಿ ತಾಂತ್ರಿಕ ತಜ್ಞರ ಸಮಿತಿಯೊಂದನ್ನು ರಚಿಸುವಂತೆಯೂ ಪಾಂಡೆ ಅರ್ಜಿಯಲ್ಲಿ ಕೋರಿದ್ದಾರೆ.







