ನಾಝಿಗಳ ಯಾತನಾ ಶಿಬಿರದಲ್ಲಿ ಕೆಲಸ ಮಾಡಿದ್ದ 97 ವರ್ಷದ ಮಹಿಳೆ ದೋಷಿ: ಜರ್ಮನ್ ಕೋರ್ಟ್ ತೀರ್ಪು

ಬರ್ಲಿನ್,ಡಿ.20: ಎರಡನೆ ಮಹಾಯುದ್ದ ಕಾಲದಲ್ಲಿ ನಾಝಿ ಯಾತನಾ ಶಿಬಿರ(Nazi concentration camp)ದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ 97 ವರ್ಷ ವಯಸ್ಸಿನ ಮಹಿಳೆಯನ್ನು ದೋಷಿಯೆಂದು ಪರಿಗಣಿಸಿ ಮಂಗಳವಾರ ಜರ್ಮನಿಯ ನ್ಯಾಯಾಲಯವು ತೀರ್ಪು ನೀಡಿದೆ.
ನಾಝಿಗಳ ಯಾತನಾಶಿಬಿರದಲ್ಲಿ 10,500ಕ್ಕೂ ಅಧಿಕ ಮಂದಿಯ ಹತ್ಯೆಗೆ ನೆರವಾದ ಹಾಗೂ ಸಹಕರಿಸಿದ ಆರೋಪದಲ್ಲಿ ಇರ್ಮ್‌ಗಾರ್ಡ್ ಫರ್ಶ್ನರ್‌ಗೆ ಉತ್ತರ ಜರ್ಮನಿಯ ನಗರವಾದ ಇಝೆಹೊನ ಜಿಲ್ಲಾ ನ್ಯಾಯಾಲಯವು ಎರಡು ವರ್ಷಗಳ ಅಮಾನತಿನಲ್ಲಿರಿಸಲಾದ ಜೈಲು ಶಿಕ್ಷೆಯನ್ನು ವಿಧಿಸಿದೆ.
ಈಗಿನ ಪೊಲ್ಯಾಂಡ್‌ನಲ್ಲಿರುವ ಗಡನಾಸ್ಕ್ ನಗರದ ಸಮೀಪದಲ್ಲಿರುವ ಸ್ಟಟ್‌ಹೊಫ್‌ನ ಯಾತನಾಶಿಬಿರದಲ್ಲಿರುವ ಗ್ಯಾಸ್‌ಚೇಂಬರ್‌ನಲ್ಲಿ 65ಸಾವಿರಕ್ಕೂ ಅಧಿಕ ಮಂದಿ ಹಸಿವು ಹಾಗೂ ರೋಗದಿಂದ ಸಾವನ್ನಪ್ಪಿದ್ದರು. ಈ ಯಾತನಾಶಿಬಿರದಲ್ಲಿ ಯುದ್ದಕೈದಿಗಳು ಹಾಗೂ ಯಹೂದಿಗಳನ್ನು ಬಂಧಿಸಿಡಲಾಗಿತ್ತು.
ಅಪರಾಧ ಎಸಗಿದ ಅವಧಿಯಲ್ಲಿ ಫರ್ಶ್ನರ್‌ಗೆ 18ರಿಂದ 19ರ ಮಧ್ಯದ ವರ್ಷವಾಗಿದ್ದರಿಂದ ಆಕೆಯನ್ನು ಬಾಲಪರಾಧ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.