3 ಯುಟ್ಯೂಬ್ ಚಾನೆಲ್‌ಗಳಿಂದ ಪ್ರಧಾನಿ, ಸಿಜೆಐ, ಚು.ಆಯೋಗದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಕೇಂದ್ರ ಸರಕಾರ

ಹೊಸದಿಲ್ಲಿ, ಡಿ. 20: ಒಟ್ಟು 13 ಲಕ್ಷ ಚಂದಾದಾರರನ್ನು ಹೊಂದಿರುವ ಮೂರು ಯುಟ್ಯೂಬ್ ಚಾನೆಲ್‌ಗಳು ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ಪ್ರಮುಖ ಸಂಸ್ಥೆಗಳ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿವೆ ಎಂದು ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ. ಈ ಯುಟ್ಯೂಬ್ ಚಾನೆಲ್‌ಗಳೆಂದರೆ ನ್ಯೂಸ್ ಹೆಡ್‌ಲೈನ್ಸ್, ಸರಕಾರಿ ಅಪಡೇಟ್ ಹಾಗೂ ಆಜ್ ತಕ್ ಲೈವ್.
ಈ ಮೂರು ಚಾನೆಲ್‌ಗಳ ವಿರುದ್ಧದ ತನಿಖೆಯನ್ನು ಮಾಹಿತಿ ಪ್ರಸಾರ ಮಾಡುವ ಸರಕಾರದ ನೋಡಲ್ ಏಜನ್ಸಿಯಾದ ಪ್ರೆಸ್ ಇನ್‌ಫಾರ್ಮೇಶನ್ ಬ್ಯುರೋದ ಸತ್ಯ ಶೋಧನಾ ಘಟಕ ನಡೆಸಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.
ಈ ಘಟಕ 40ಕ್ಕೂ ಅಧಿಕ ಸರಣಿ ಸತ್ಯ ಶೋಧನೆಯನ್ನು ಕೈಗೊಂಡಿದೆ. ಹಲವು ವೀಡಿಯೊಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಚುನಾವಣಾ ಆಯೋಗ, ಇವಿಎಂ ಮತದಾನದ ವ್ಯವಸ್ಥೆ ಕುರಿತು ತಪ್ಪು ಮಾಹಿತಿ ಪ್ರಸಾರ ಮಾಡಿರುವುದು ಪತ್ತೆಯಾಗಿದೆ. ಈ ವೀಡಿಯೊಗಳನ್ನು 30 ಕೋಟಿಗೂ ಅಧಿಕ ಬಾರಿ ವೀಕ್ಷಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ಈ ಚಾನೆಲ್‌ಗಳಲ್ಲಿ ಹಂಚಿಕೊಳ್ಳಲಾದ ತಪ್ಪು ಮಾಹಿತಿಗಳಲ್ಲಿ ಮುಂದಿನ ಚುನಾವಣೆಗಳು ಮತಪತ್ರದ ವ್ಯವಸ್ಥೆಯ ಮೂಲಕ ನಡೆಯಲಿದೆ ಎಂದು ಪ್ರತಿಪಾದಿಸುವ ಸುಳ್ಳು ಸುದ್ದಿ ಕೂಡ ಒಳಗೊಂಡಿದೆ. ಬ್ಯಾಂಕ್ ಖಾತೆ ಅಥವಾ ಆಧಾರ್ ಕಾರ್ಡ್ ಹೊಂದಿರುವ ಯಾರಿಗಾದರೂ ಸರಕಾರ ಹಣ ವಿತರಿಸುತ್ತದೆ ಎಂದು ಇನ್ನೊಂದು ವೀಡಿಯೊ ಹೇಳಿದೆ.
ಈ ಯುಟ್ಯೂಬ್ ಚಾನೆಲ್‌ಗಳು ಟಿವಿ ಚಾನೆಲ್‌ಗಳ ಲೋಗೋಗಳು ಮತ್ತು ಪ್ರಮುಖ ಸುದ್ದಿ ನಿರೂಪಕರ ಚಿತ್ರಗಳನ್ನು ಬಳಸಿಕೊಂಡು ಸುದ್ದಿ ಅಧಿಕೃತ ಎಂದು ವೀಕ್ಷಕರು ನಂಬುವಂತೆ ಮಾಡುತ್ತಿದೆ ಎಂದು ತನಿಖೆ ಕಂಡುಕೊಂಡಿದೆ. ಈ ಚಾನೆಲ್‌ಗಳು ತಮ್ಮ ವೀಡಿಯೊಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವುದು ಹಾಗೂ ಯುಟ್ಯೂಬ್‌ನಲ್ಲಿ ತಪ್ಪು ಮಾಹಿತಿಯಿಂದ ಹಣ ಗಳಿಸುತ್ತಿರುವುದು ಕೂಡ ಪತ್ತೆಯಾಗಿದೆ ಎಂದು ಪಿಐಬಿ ಹೇಳಿಕೆ ತಿಳಿಸಿದೆ.
ತಪ್ಪು ಮಾಹಿತಿ ಪ್ರಸಾರ ತಡೆಯುವ ಭಾಗವಾಗಿ ಕಳೆದ ಒಂದು ವರ್ಷಗಳಲ್ಲಿ ನೂರಕ್ಕೂ ಅಧಿಕ ಯುಟ್ಯೂಬ್ ಚಾನೆಲ್‌ಗಳನ್ನು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಸ್ಥಗಿತಗೊಳಿಸಿದೆ.







