ಅಧಿವೇಶನದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಚರ್ಚಿಸಲು ದಲಿತ ಸಂಘಟನೆಗಳು ಒತ್ತಾಯ
ಬೆಂಗಳೂರು, ಡಿ.20: ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ಸಂಬಂಧಿಸಿ, ಸದಾಶಿವ ಆಯೋಗದ ಶಿಫಾರಸ್ಸುಗಳನ್ನುಸದ್ಯ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಮಂಡಿಸಬೇಕು ಎಂದು ದಲಿತ ಪರ ಸಂಘಟನೆಗಳು ಒತ್ತಾಯಿಸಿವೆ.
ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾನವ ಹಕ್ಕುಗಳ ವೇದಿಕೆ ಸಂಚಾಲಕ ಬಸವರಾಜ್ ಕೌತಾಳ್, ಒಳಮೀಸಲಾತಿಗೆ ಸಂಬಂಧಿಸಿದಂತೆ ಎ.ಜೆ. ಸದಾಶಿವಾ ಆಯೋಗದ ವರದಿಯನ್ನು 2013ರಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಈವರೆಗೆ ವರದಿಯನ್ನು ಜಾರಿಗೆ ತಂದಿಲ್ಲ. ಶೋಷಿತ ಸಮುದಾಯಗಳಿಗೆ ವಂಚಿಸುವ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ(ಭೀಮವಾದ)ದ ರಾಜ್ಯಾಧ್ಯಕ್ಷ ಡಾ.ಆರ್. ಮೋಹನ್ ರಾಜ್ ಮಾತನಾಡಿ, ಜನ ಸಂಖ್ಯೆಯ ಅನುಗುಣವಾಗಿ 101 ಜಾತಿಗಳಲ್ಲಿ ಒಳಮೀಸಲಾತಿ ಹಂಚಿಕೆಯಾಗಬೇಕು. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಹರಿಯದೆ, ವಿನಾಕಾರಣ ಇದನ್ನು ವಿರೋಧಿಸುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ರಾಜ್ಯ ಸರಕಾರವು ಎ.ಜೆ. ಸದಾಶಿವಾ ಆಯೋಗದ ವರದಿಯನ್ನು ಚರ್ಚಿಸಿ ಕೂಡಲೇ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲವಾದಲ್ಲಿ ಜ.10ರಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್‍ಪಿಐ ಪಕ್ಷದ ಜಿಲ್ಲಾಧ್ಯಕ್ಷ ಪ್ರಕಾಶ್ ಸೇರದಂತೆ ಮತ್ತಿತರರು ಉಪಸ್ಥಿತರಿದ್ದರು.