ವಿಶ್ವಕಪ್ ಸಂಭ್ರಮಾಚರಣೆಗೆ ಬೀದಿಗಿಳಿದ ಲಕ್ಷಾಂತರ ಜನ, ತೆರೆದ ಬಸ್ ಬಿಟ್ಟು ಹೆಲಿಕಾಪ್ಟರ್ ಏರಿದ ಮೆಸ್ಸಿ ಬಳಗ

ಬ್ಯುನಸ್ ಐರಿಸ್: ಅರ್ಜೆಂಟೀನದ ವಿಶ್ವಕಪ್ ಪ್ರಶಸ್ತಿಯನ್ನು ಆಚರಿಸಲು ಲಕ್ಷಾಂತರ ಜನರು ಮಂಗಳವಾರ ಬ್ಯೂನಸ್ ಐರಿಸ್‌ನಲ್ಲಿ ಬೀದಿಗಿಳಿದರು. ಕಿಕ್ಕಿರಿದು ಸೇರಿದ್ದ ಜನರು ವಿಶ್ವಕಪ್ ವಿಜೇತ ತಂಡದ ಯೋಜಿತ ಮೆರವಣಿಗೆ ಮಾರ್ಗವನ್ನು ಅಡ್ಡಿಪಡಿಸಿದರು. ಹೀಗಾಗಿ ಲಿಯೊನೆಲ್ ಮೆಸ್ಸಿ ಹಾಗೂ ಅವರ ತಂಡದ ಸದಸ್ಯರು ತೆರೆದ ಬಸ್ ಅನ್ನು ತ್ಯಜಿಸಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿದರು.
ಅರ್ಜೆಂಟೀನ ತಂಡ ಫ್ರಾನ್ಸ್ ಅನ್ನು ಸೋಲಿಸಿ ತನ್ನ ಮೂರನೇ ವಿಶ್ವಕಪ್ ಪ್ರಶಸ್ತಿ ಜಯಿಸಿ 36 ವರ್ಷಗಳ ಕನಸು ಈಡೇರಿಸಿಕೊಂಡ ಕಾರಣ ಫುಟ್ಬಾಲ್-ಕ್ರೇಜಿಂಗ್ ದೇಶವು ರವಿವಾರದಿಂದ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ತಂಡದ ಬಸ್ ವಿಮಾನ ನಿಲ್ದಾಣಕ್ಕೆ 3 ಗಂಟೆಗೆ ಆಗಮಿಸಿದ ನಂತರ ಜನಸಮೂಹವು ಬಸ್ ಅನ್ನು ಸುತ್ತುವರಿದರು. ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದರು ಕನಿಷ್ಠ 4 ಮಿಲಿಯನ್ ಜನರು ರಸ್ತೆಯಲ್ಲಿ ಜಮಾಯಿಸಿದ ಕಾರಣ ವಿಶ್ವಕಪ್ ವಿಜೇತ ತಂಡವು ರಸ್ತೆ ಮೂಲಕ ಬಸ್ ನಲ್ಲಿ ಸಾಗುವ ಯೋಜನೆ ಕೈಬಿಡಬೇಕಾಯಿತು.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಅಭಿಮಾನಿಯೊಬ್ಬ ಮೆಸ್ಸಿ ಸಾಗುತ್ತಿದ್ದ ತಂಡದ ಬಸ್ ಮೇಲೆ ಸೇತುವೆಯಿಂದ ಬೀಳುತ್ತಿರುವುದು ಕಂಡುಬಂದಿದೆ. ಅದೇ ಸಮಯದಲ್ಲಿ ಫುಟ್ಬಾಲ್ ಅಸೋಸಿಯೇಷನ್‌ನ ಮುಖ್ಯಸ್ಥ ಚಿಕ್ವಿ ಟಾಪಿಯಾ ಅವರು ಬಸ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಬೆಂಬಲಿಗರಿಗೆ ಅವರು ಕ್ಷಮೆಯಾಚಿಸಿದರು.
ಅರ್ಜೆಂಟೀನ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಅವರು ವಿಶ್ವಕಪ್ ಸಂಭ್ರಮಾಚರಣೆಗೆ ಮಂಗಳವಾರ ಸಾರ್ವತ್ರಿಕ ರಜೆ ಘೋಷಿಸಿದ ನಂತರ, ಸ್ಥಳೀಯ ಟಿವಿಯಲ್ಲಿ ಪ್ರಸಾರವಾದ ದೃಶ್ಯದಲ್ಲಿ ಅರ್ಜೆಂಟೀನದ ಜನತೆ ಹೆದ್ದಾರಿಯ ಸೇತುವೆಗಳಲ್ಲಿ ತುಂಬಿ ತುಳುಕಿರುವುದು, ಲೈಟ್ ಪೋಸ್ಟ್‌ಗಳು ಮತ್ತು ವಾಹನಗಳನ್ನು ಹತ್ತಿ ವೀಕ್ಷಿಸುತ್ತಿರುವುದು , ಶರ್ಟ್‌ಗಳು ಮತ್ತು ಧ್ವಜಗಳನ್ನು ಬೀಸುತ್ತಿರುವುದನ್ನು ತೋರಿಸಿದೆ.