ಶಾಸಕಿ ಅಂಜಲಿ ನಿಂಬಾಳ್ಕರ್ ರನ್ನು ಅಮಾನತು ಮಾಡಿ...: ಸದನದಲ್ಲಿ ಸಚಿವ ಮಾಧುಸ್ವಾಮಿ ಆಕ್ರೋಶ
ಬೆಳಗಾವಿ,ಡಿ.20: ಬುಧವಾರ 3ನೇ ದಿನದ ವಿಧಾನಸಭೆ ಕಲಾಪದಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ ಸಚಿವ ಕಾರಜೋಳ ಅವರು ವಿಪಕ್ಷ ಸದಸ್ಯರ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಸಚಿವ ಮಾಧುಸ್ವಾಮಿ ಅವರು ಮಾತನಾಡುತ್ತಿದ್ದಾಗ, ಬಾವಿಯಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿ, ಅಂಜಲಿ ನಿಂಬಾಳ್ಕರ್ ಅವರನ್ನು ಅಮಾನತು ಮಾಡುಬೇಕು ಎಂದು ಒತ್ತಾಯಿಸಿದರು.
'ಈ ಬಗ್ಗೆ ನಾನು ಸಂಸದೀಯ ವ್ಯವಹಾರಗಳ ಸಚಿವನಾಗಿ ನಿರ್ಣಯ ಮಾಡುತ್ತೇನೆ. ಸದನದಿಂದ ಆಚೆ ಹಾಕಲೇ ಬೇಕು. ಹೊರಗಡೆ ಹಾಕ್ತೀರೋ ಇಲ್ವಾ?' ಎಂದು ಪೀಠದಲ್ಲಿ ಇದ್ದ ಕುಮಾರ್ ಬಂಗಾರಪ್ಪ ಅವರಿಗೆ ಮಾಧುಸ್ವಾಮಿ ಪ್ರಶ್ನೆ ಮಾಡಿದರು.
ಮಾಧುಸ್ವಾಮಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಆರ್. ವಿ ದೇಶಪಾಂಡೆ, ಈವರೆಗೆ ಸದನದಲ್ಲಿ ಯಾವ ಮಹಿಳೆಯನ್ನೂ ಹಾಗೆ ನಡೆಸಿಕೊಂಡಿಲ್ಲ. ಇದು ಸರಿಯಲ್ಲ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವ ರೀತಿಯಲ್ಲಿ ಸರಿಯಾದ ನಡೆಯಲ್ಲ ಎಂದು ಆಕ್ಷೇಪಿಸಿದರು.
ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಸದನದಲ್ಲಿ ತೀವ್ರ ಗದ್ದಲ ಮುಂದುವರಿದ ಹಿನ್ನೆಲೆ ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದರು.
ಇದನ್ನೂ ಓದಿ: ನಂ.1 ಸ್ಥಾನ ನನಗೆ ಮಾತ್ರ ದಕ್ಕಬೇಕೆಂಬ ಅಹಂ ಬಿಟ್ಟುಬಿಡಿ: ನಟಿ ರಮ್ಯಾ ಭಾವನಾತ್ಮಕ ಮನವಿ