66 ಮಕ್ಕಳ ಸಾವಿಗೆ ಭಾರತದ ಮೇಡನ್ ಫಾರ್ಮಾಸ್ಟೂಟಿಕಲ್ಸ್ ಹೊಣೆ: ಗಾಂಬಿಯಾ ಸಂಸತ್ ಸಮಿತಿ ವರದಿ
ಔಷಧಿ ಕಂಪೆನಿಯ ವಿರುದ್ಧ ಕಾನೂನುಕ್ರಮ, ಆಮದು ನಿಷೇಧಕ್ಕೆ ಶಿಫಾರಸು

ಹೊಸದಿಲ್ಲಿ,ಡಿ.21: ಆಫ್ರಿಕದ ರಾಷ್ಟ್ರವಾದ ಗಾಂಬಿಯಾ(Gambia)ದಲ್ಲಿ 66 ಮಕ್ಕಳ ಸಾವಿಗೆ ಕಾರಣವಾಗಿವೆಯೆನ್ನಲಾದ ಕಮ್ಮಿನ ಸಿರಪ್‌ಗಳ ರಫ್ತು ಮಾಡಿರುವುದಕ್ಕೆ ಭಾರತದ ಔಷಧಿ ಉತ್ಪಾದಕ ಸಂಸ್ಥೆ ‘ಮೇಡನ್ ಫಾರ್ಮಾಸ್ಯೂಟಿಕಲ್ಸ್’ (Maiden Pharmaceuticals)ಅನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಆ ದೇಶದ ಸಂಸತ್ ರಚಿಸಿದ ಸಮಿತಿಯ ವರದಿ ಶಿಫಾರಸು ಮಾಡಿದೆ.
‘ಅಟ್ಲಾಂಟಿಕ್ ಬ್ರಾಂಡ್ ಹೆಸರಿನೊಂದಿಗೆ ‘ಗಾಂಬಿಯಾಕ್ಕೆ ಕಲುಷಿತ ಔಷಧಿಗಳನ್ನು ರಪ್ತು ಮಾಡಿದ್ದಕ್ಕಾಗಿ ಮೇಡನ್ ಫಾರ್ಮಾಸ್ಯೂಟಿಕಲ್ಸ್ ವಿರುದ್ಧ ಸರಕಾರವು ಕಾನೂನುಕ್ರಮವನ್ನು ಕೈಗೊಳ್ಳಬೇಕು ಎಂದು ಮಕ್ಕಳ ಸಾವಿನ ಪ್ರಕರಣಗಳ ತನಿಖೆ ನಡೆಸಿರುವ ಸಮಿತಿಯು ಸಂಸತ್‌ಗೆ ತಿಳಿಸಿದೆ.
ಭಾರತದ ಔಷಧಿ ತಯಾರಕ ಸಂಸ್ಥೆ ಮೇಡನ್ ಫಾರ್ಮಾಸ್ಯೂಟಿಕಲ್ಸ್ ಹಾಗೂ ಅದರ ಉತ್ಪನ್ನಗಳನ್ನು ಗಾಂಬಿಯಾದಲ್ಲಿ ನಿಷೇಧಿಸಬೇಕೆಂಬುದಾಗಿಯೂ ಸಮಿತಿಯು ಶಿಪಾರಸು ಮಾಡಿದೆ.
ಮೇಡನ್ ಫಾರ್ಮಾಸ್ಯೂಟಿಕಲ್ಸ್‌ನ ಉತ್ಪಾದನೆಗಳಾದ ಫ್ರೊಮೆಥಝೈನ್ ಓರಲ್ ಸೊಲ್ಯೂಶನ್, ಕೊಫೆಕ್ಸ್‌ಮಾಲಿನ್ ಬೇಬಿ ಕಫ್ ಸಿರಪ್, ಮೇಕಫ್ ಬೇಬಿ ಕಪ್ ಸಿರಪ್ ಹಾಗೂ ಮ್ಯಾಗ್‌ರಿಪ್ ಎನ್ ಕೋಲ್ಡ್ ಸಿರಪ್ ಎಂಬ ನಾಲ್ಕು ಕೆಮ್ಮಿನ ಔಷಧಿಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಕಟ್ಟೆಚ್ಚರವನ್ನು ಘೋಷಿಸಿದ ಎರಡು ತಿಂಗಳುಗಳ ಬಳಿಕ ಸಮಿತಿಯ ವರದಿ ಬಿಡುಗಡೆಯಾಗಿದೆ.
ಈ ಔಷಧಿಗಳ ಸೇವನೆಯಿಂದಾಗಿ ಗಾಂಬಿಯಾ ದೇಶದ 66ಕ್ಕೂ ಅಧಿಕ ಮಕ್ಕಳು ತೀವ್ರವಾದ ಮೂತ್ರಜನಕಾಂಗ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







