ಬೈಂದೂರು ಗಾಂಧಿ ಮೈದಾನ ಉಳಿಸಿ ಧರಣಿ, ಪ್ರತಿಭಟನೆ
ಬೈಂದೂರು: ಗಾಂಧಿ ಮೈದಾನ ಸಂರಕ್ಷಣಾ ಸಮಿತಿ ಬೈಂದೂರು ಇದರ ವತಿಯಿಂದ ಗಾಂಧಿ ಮೈದಾನ ಉಳಿಸಿ ಧರಣಿ ಹಾಗೂ ಪ್ರತಿಭಟನೆ ಬೈಂದೂರು ಗಾಂಧಿ ಮೈದಾನದ ಆವರಣದಲ್ಲಿ ಎರಡನೇ ದಿನವಾದ ಬುಧವಾರವೂ ಮುಂದುವರಿಯಿತು.
ಮಂಗಳವಾರದ ಪ್ರತಿಭಟನೆಯಲ್ಲಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭಾಗವಹಿಸಿ ಮಾತನಾಡಿ, ಕನ್ನಡದ ಶ್ರೇಷ್ಟ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರು ಈ ನಾಡಿನ ಆಸ್ತಿ. ಅವರು ನಮ್ಮ ಬೈಂದೂರು ಕ್ಷೇತ್ರದ ಮೂಲದವರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಅವರ ಹೆಸರಿನಲ್ಲಿ ಪುರಭವನ ನಿರ್ಮಾಣ ಬೈಂದೂರಿಗೆ ಅತ್ಯವಶ್ಯಕ ಎಂದರು.
ಪ್ರಸ್ತುತ ನಿರ್ಮಾಣಗೊಳ್ಳುವ ಭವನದ ಪರ-ವಿರೋಧದ ಮೂಲಕ ಅಡಿಗರ ಹೆಸರಿಗೆ ಕಳಂಕ ಬರುವ ಕಾರಣ ಜಿಲ್ಲಾಧಿಕಾರಿಗಳು ತಕ್ಷಣ ಹೋರಾಟಗಾರರು, ಸಂಘ ಸಂಸ್ಥೆಯ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸಮನ್ವಯತೆಯಿಂದ ಇತ್ಯರ್ಥಗೊಳಿಸಿ ಗೊಂದಲ ಬಗೆಹರಿಸಬೇಕು ಎಂದರು.
ಗಾಂಧಿ ಮೈದಾನ ಸಂರಕ್ಷಣಾ ಸಮಿತಿ ಮುಂದಾಳು ಗಿರೀಶ್ ಬೈಂದೂರು ಮಾತನಾಡಿ, ಗಾಂಧಿ ಮೈದಾನ ಬೈಂದೂರಿನ ಪ್ರಮುಖ ಆಸ್ತಿ. ವಿದ್ಯಾರ್ಥಿ ಗಳಿಗೆ ಹಾಗೂ ಸಾರ್ವಜನಿಕರಿಗೆ ಅತ್ಯವಶ್ಯಕವಾಗಿದೆ. ಬಲಾತ್ಕಾರದಿಂದ ಕಾಮಗಾರಿ ನಡೆಸುವುದು ಸರಿಯಲ್ಲ. ಈ ಕುರಿತು ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಈ ಸಂದರ್ಭದಲ್ಲಿ ಗಾಂಧಿ ಮೈದಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಿಜೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರಿಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆಯಲ್ಲಿ ಯಡ್ತರೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ, ಮಾಜಿ ಗ್ರಾಪಂ ಸದಸ್ಯ ಗಣೇಶ ದೇವಾಡಿಗ, ನಾಗರಾಜ ಗಾಣಿಗ, ರಾಘವೇಂದ್ರ ಪಡುವರಿ, ರಾಮ ಉಪ್ಪುಂದ ಮೊದಲಾದವರು ಇದ್ದರು.