3ನೇ ದಿನಕ್ಕೆ ಕಾಲಿಟ್ಟ ಸರಕಾರಿ ನೌಕರರ ಪ್ರತಿಭಟನೆ; ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯ

ಬೆಂಗಳೂರು, ಡಿ.21: ಸರಕಾರ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಈ ಹಿಂದೆ ಇದ್ದ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸರಕಾರಿ ನೌಕರರ ಸಂಘವು ಕೈಗೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಡಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳ ಸರಕಾರಿ ನೌಕರರು ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕಳೆದ ಸೋಮವಾರದಿಂದಲೂ ಪ್ರತಿಭಟನೆಯನ್ನು ನಡೆಸುತ್ತಿದ್ದು, ಈವರೆಗೆ ಸರಕಾರದಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಶಿಕ್ಷಕರ ಆಗ್ರಹವನ್ನು ಸರಕಾರ ಒಪ್ಪದಿರುವ ಕಾರಣ ಹೋರಾಟ ಮುಂದುವರಿಯುತ್ತಿದೆ. ಮುಖ್ಯಮಂತ್ರಿಗಳು ನಿಶ್ಚಿತ ಪಿಂಚಣಿಯನ್ನಾದರೂ ಜಾರಿಗೆ ತರುವುದಾಗಿ ಘೋಷಿಸಬೇಕು. ಇದರಿಂದ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ ಎಂದರು.
ಎನ್‍ಪಿಎಸ್ ಅನ್ನು ಆರಂಭದಲ್ಲೇ ಪಶ್ಚಿಮ ಬಂಗಾಳದಲ್ಲಿ ವಿರೋಧಿಸಲಾಗಿತ್ತು. ಜಾರ್ಖಂಡ್ ಪಂಜಾಬ್‍ನಲ್ಲೂ ಹಳೆಯ ಪಿಂಚಣಿ ಯೋಜನೆಯೇ ಜಾರಿಯಲ್ಲಿದೆ. ಈಗಿರುವಾಗ ಕರ್ನಾಟಕಕ್ಕೆ ಏಕೆ ಓಪಿಎಸ್ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಮಾತನಾಡಿ, ಪ್ರತಿಭಟನೆಯನ್ನು ಕೈಗೊಂಡು ನಾಲ್ಕು ದಿನಗಳಾದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ‘ವೋಟ್ ಫಾರ್ ಒಪಿಎಸ್’ ಎಂಬ ಅಭಿಯಾನದ ಮೂಲಕ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ನಿವೃತ್ತ ನೌಕರರೂ ಸಹ ಬೆಂಬಲ ಸೂಚಿಸಿದ್ದು, 2.60 ಲಕ್ಷ ಸರಕಾರಿ ನೌಕರರು ಹಾಗೂ 5 ಲಕ್ಷ ನಿಗಮ ಮಂಡಳಿ ಹಾಗೂ ಅನುದಾನ ರಹಿತ ಶಾಲೆಗಳ ನೌಕರರು ಸೇರಿ ಅಭಿಯಾನದಲ್ಲಿ ಭಾಗವಹಿಸಿದ್ದೇವೆ. ಪ್ರಸ್ತುತ ಸರಕಾರ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಿದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸುತ್ತೇವೆ. ಇಲ್ಲದಿದ್ದರೆ ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಲಾಗುವುದು. ಎಂದಿಗೂ ನಮ್ಮ ಮತ ಒಪಿಎಸ್ ಪರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.






.jpg)
.jpg)
.jpg)
.jpg)

