19 ವರ್ಷಗಳ ನಂತರ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ನೇಪಾಳ ಜೈಲಿನಿಂದ ಬಿಡುಗಡೆ
ಹಲವು ದೇಶಗಳನ್ನು ಬೆಚ್ಚಿಬೀಳಿಸಿದ್ದ ಹಂತಕನ ಬಗ್ಗೆ ಇಲ್ಲಿದೆ ವಿವರ

ಕಠ್ಮಂಡು: ನೇಪಾಳದ ಸರ್ವೋಚ್ಚ ನ್ಯಾಯಾಲಯವು ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಅವರ ಆರೋಗ್ಯ ಸ್ಥಿತಿ ಮತ್ತು ವಯಸ್ಸಿನ ಕಾರಣ ನೀಡಿ ಆತನನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿದ್ದ 'ಸರ್ಪೆಂಟ್' ಚಿತ್ರ ಸರಣಿಯ ಕಥಾನಾಯಕ ಹಾಗೂ ಫ್ರೆಂಚ್ ಮೂಲದ ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ 19 ವರ್ಷಗಳ ಸುದೀರ್ಘ ಸೆರೆವಾಸದಿಂದ ಚಾರ್ಲ್ಸ್ ಶೋಭರಾಜ್ ಬಿಡುಗಡೆಯಾಗುತ್ತಿದ್ದಾನೆ.
ಫ್ರೆಂಚ್ ಪ್ರಜೆಯಾಗಿದ್ದ ಚಾರ್ಲ್ಸ್ ಶೋಬರಾಜ್, 1970 ರ ದಶಕದಲ್ಲಿ ಏಶ್ಯಾದಾದ್ಯಂತ ಸರಣಿ ಕೊಲೆಗಳನ್ನು ಮಾಡಿ ಬೆಚ್ಚಿ ಬೀಳಿಸಿದ್ದ ಹಂತಕನಾಗಿದ್ದು, ಆತ 20 ಕ್ಕೂ ಹೆಚ್ಚು ಹತ್ಯೆಗಳನ್ನು ಮಾಡಿದ್ದಾನೆ. ಶೋಬರಾಜ್, ಫ್ರೆಂಚ್ ಪ್ರವಾಸಿಯೊಬ್ಬರಿಗೆ ವಿಷ ನೀಡಿದ ಹಾಗೂ ಇಸ್ರೇಲಿ ಪ್ರಜೆಯನ್ನು ಕೊಂದ ಪ್ರಕರಣದಲ್ಲಿ ಭಾರತದಲ್ಲಿ 21 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ.
ಶೋಭರಾಜ್ ಹಾಂಗ್ ಕಾಂಗ್ ನ ನಕಲಿ ಗುರುತಿ ಚೀಟಿಯೊಂದಿಗೆ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದ ವೇಳೆ, ನೇಪಾಳದ ರಾಜಧಾನಿ ಕಠ್ಮಂಡುವಿನ ಕ್ಯಾಸಿನೊ ಒಂದರಿಂದ ಪೊಲೀಸರು ಬಂಧಿಸಿದ್ದರು. 2003 ರಿಂದ ನೇಪಾಳಿ ಜೈಲಿನಲ್ಲಿರುವ ಶೋಬರಾಜ್‌ಗೆ ಈಗ 78 ವರ್ಷ ವಯಸ್ಸಾಗಿದೆ. ಇಬ್ಬರು ಅಮೆರಿಕನ್ ಪ್ರವಾಸಿಗರನ್ನು ಕೊಂದ ಆರೋಪದ ಮೇಲೆ ಆತನನ್ನು ನೇಪಾಳಿ ಜೈಲಿನಲ್ಲಿ ಇರಿಸಲಾಗಿತ್ತು.
ಬುಧವಾರ, ನ್ಯಾಯಮೂರ್ತಿಗಳಾದ ಸಪನಾ ಪ್ರಧಾನ್ ಮಲ್ಲಾ ಮತ್ತು ತಿಲ್ ಪ್ರಸಾದ್ ಶ್ರೇಷ್ಠಾ ಅವರ ಪೀಠವು ಶೋಭರಾಜ್ ಅವರಿಗೆ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಕೊಲೆ ಆರೋಪದ ಮೇಲೆ ತನಗೆ ಶಿಫಾರಸು ಮಾಡಿದ ಅವಧಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇರಿಸಲಾಗಿದೆ ಎಂದ ವಾದಿಸಿದ್ದ ಶೋಭರಾಜ್, ವೃದ್ಧಾಪ್ಯದ ಆಧಾರದ ಮೇಲೆ ತನ್ನ ಶಿಕ್ಷೆಯಲ್ಲಿ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಆತನ ಅರ್ಜಿಯನ್ನು ಪುರಸ್ಕರಿಸಿ ತೀರ್ಪು ನೀಡಿದೆ.
ಡಿಸೆಂಬರ್ 1975 ರಲ್ಲಿ ಅಮೇರಿಕನ್ ಪ್ರಜೆ ಕೋನಿ ಜೋ ಬ್ರೋಂಜಿಚ್ ಮತ್ತು ಕೆನಡಾದ ಪ್ರಜೆ ಲಾರೆಂಟ್ ಕ್ಯಾರಿಯರ್ ಎಂಬವರ ಹತ್ಯೆಗಾಗಿ ಭಕ್ತಾಪುರದ ಜಿಲ್ಲಾ ನ್ಯಾಯಾಲಯವು ಶೋಬರಾಜ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ನ್ಯಾಯಾಲಯದ ತೀರ್ಪಿನ ಪ್ರಕಾರ, ಜೀವಾವಧಿ ಶಿಕ್ಷೆಯ ಅವಧಿಯ ಪ್ರಕಾರ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಲು ಶೋಭರಾಜ್ ಸೆಪ್ಟೆಂಬರ್ 18, 2023 ರವರೆಗೆ ಜೈಲಿನಲ್ಲಿ ಇರಬೇಕಾಗಿತ್ತು.
ತಾನು ಶಿಕ್ಷೆಯ 20 ವರ್ಷಗಳಲ್ಲಿ 17 ವರ್ಷಗಳನ್ನು ಈಗಾಗಲೇ ಪೂರೈಸಿದ್ದೇನೆ ಮತ್ತು ಉತ್ತಮ ನಡವಳಿಕೆಗಾಗಿ ಈಗಾಗಲೇ ಬಿಡುಗಡೆಗೆ ಶಿಫಾರಸು ಮಾಡಲಾಗಿದೆ ಎಂದು ಶೋಭರಾಜ್ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಶೋಭರಾಜ್ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ನೇಪಾಳ ಸರ್ಕಾರವು ಶೋಭರಾಜ್ ಅವರ ಅಪರಾಧಕ್ಕೆ ವಿನಾಯಿತಿ ನೀಡಲಾಗಿಲ್ಲ ಮತ್ತು ಅವರು ವಿದೇಶಿ ಪ್ರಜೆಯಾಗಿರುವುದರಿಂದ ಅವರಿಗೆ ವಿನಾಯಿತಿ ನೀಡಲಾಗುವುದಿಲ್ಲ ಎಂದು ಹೇಳಿತ್ತು.
"ಅಪರಾಧಿಗೆ ವಯಸ್ಸು, ಕಾಯಿಲೆ ಅಥವಾ ಇತರ ಕಾರಣಗಳಿಂದ ವಿನಾಯಿತಿ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಜೈಲು ಶಿಕ್ಷೆಯನ್ನು ಕಡಿಮೆ ಮಾಡಬಹುದಾದರೂ, ಕೊಲೆ, ಕಳ್ಳಸಾಗಣೆ, ಅತ್ಯಾಚಾರ, ಪರಾರಿ ಇತ್ಯಾದಿ ಪ್ರಕರಣಗಳಲ್ಲಿ ಅದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ" ಎಂದು ಸರ್ಕಾರ ಹೇಳಿತ್ತು.
ಅದಾಗ್ಯೂ, ಆರೋಗ್ಯ ಮತ್ತು ವಯಸ್ಸಿನ ಆಧಾರದ ಮೇಲೆ ಶೋಭರಾಜ್‌ನನ್ನು ಬಿಡುಗಡೆ ಮಾಡುವ ತೀರ್ಪು ನೀಡಿರುವ ನ್ಯಾಯಾಲಯವು ಆತನನ್ನು ಗಡಿಪಾರು ಮಾಡಲು ಆದೇಶಿಸಿದೆ. ಆದರೆ ಅವರನ್ನು ಎಲ್ಲಿಗೆ ಗಡೀಪಾರು ಮಾಡಲಾಗುವುದು ಎಂದು ನಮೂದಿಸಿಲ್ಲ ಎಂದು ANI ವರದಿ ಮಾಡಿದೆ.