ಅಂತರ್‌ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಅದ್ಧೂರಿಯ ಚಾಲನೆ
ವಿಶ್ವ ಶಾಂತಿ, ಕಲ್ಯಾಣಕ್ಕೆ ಕಾರ್ಯ ಪ್ರವೃತರಾಗಿ; ಯುವಕರಿಗೆ ರಾಜ್ಯಪಾಲ ಕರೆ

ಮಂಗಳೂರು: ಯುವಸಮೂಹ ಸಾಮಾಜಿಕ ಹಿತರಕ್ಷಣೆಯ ಮೌಲ್ಯದೊಂದಿಗೆ ವಿಶ್ವ ಶಾಂತಿ, ಕಲ್ಯಾಣಕ್ಕೆ ಕಾರ್ಯಪ್ರವೃತರಾಗಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರ್‌ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ-2022ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ದೊಡ್ಡದು. ನಾನು, ನನ್ನ ಕುಟುಂಬ ದೇಶದ ಹಿತರಕ್ಷಣೆ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂದು ಆಲೋಚಿಸಿ ಮುಂದಡಿಯಿಡಬೇಕು. ಹೀಗೆ ಯೋಚಿಸಿದಾಗ ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತವನ್ನು ಮತ್ತಷ್ಟು ಪ್ರಭಾವಿ ರಾಷ್ಟ್ರವನ್ನಾಗಿ ರೂಪಿಸಬಹುದು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಮಾಜಮುಖಿ ಸ್ವರೂಪದ ವಿಶೇಷತೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಂತರ್‌ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಮೇಳಗಳ ಮೂಲಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಯುವಸಮೂಹವನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಮೇಳ ಅಂದರೆ ಒಬ್ಬರಿಗೊಬ್ಬರು ಪರಿಚಯದ ಅವಕಾಶವನ್ನು ಒದಗಿಸಿಕೊಡುವ ಮಹತ್ವದ ಸಂದರ್ಭ. ಇಂಥ ಅವಕಾಶವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಯುವಕರಿಗೆ ಒದಗಿಸಿಕೊಟ್ಟಿದೆ. ಜಾಗತಿಕ ಮನ್ನಣೆ ಪಡೆದಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವ್ಯಾಪಕವಾಗಿ ತನ್ನ ಕಾರ್ಯಸಾಮರ್ಥ್ಯವನ್ನು ವಿಸ್ತರಿಸಿಕೊಂಡಿದೆ. ಮಾನಸಿಕ, ಶಾರೀರಿಕ , ಬೌದ್ಧಿಕ ಮತ್ತು ಆದ್ಯಾತ್ಮಿಕ ಸಾಮರ್ಥ್ಯವನ್ನು ರೂಢಿಸಿ ವಿನೂತನ ಕೌಶಲ್ಯಗಳನ್ನು ತಮ್ಮದಾಗಿಸಿಕೊಳ್ಳಲು ಈ ಸಂಸ್ಥೆ ಯುವಜನರಿಗೆ ದಾರಿ ತೋರುತ್ತಿದೆ ಎಂದು ಶ್ಲಾಘಿಸಿದರು.
ಜಾಂಬೂರಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ, ಈ ವಿಶ್ವ ಜಾಂಬೂರಿಯ ಮೂಲಕ ಮಿನಿ ವಿಶ್ವ, ಮಿನಿ ಭಾರತದ ವೈಭವವನ್ನು ನೋಡುವ ಅವಕಾಶ ದೊರಕಿದೆ ಎಂದರು.
ಶಿಬಿರಾರ್ಥಿಗಳು ಈ 7 ಏಳು ದಿನಗಳ ಕಾಲ ಸ್ಕೌಟ್ಸ್, ಗೈಡ್ಸ್‌ನ ಧ್ಯೇಯಗಳನ್ನು ಮೈಗೂಡಿಸಿಕೊಂಡು, ಇಲ್ಲಿ ಸೇರಿರುವವರ ವಿಭಿನ್ನ ಆಚಾರ ವಿಚಾರಗಳನ್ನು ತಿಳಿದುಕೊಂಡು ಭವಿಷ್ಯವನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದರು.
ನಮ್ಮ ದೇಶ, ನಮ್ಮ ಸಮಾಜ ನಮ್ಮ ಭಾಷೆ ನಮಗೆ ಮುಕ್ತವಾಗಬೇಕು ಎಂದು ಅವರು ಯುವಕರಿಗೆ ಸಲಹೆ ನೀಡಿದರು.
ಉದ್ಘಾಟನಾ ಸಮಾರಂಭದ ಆರಂಭದಲ್ಲಿ ರಾಜ್ಯಪಾಲರೂ ಹಾಗೂ ಅತಿಥಿಗಳು ಆಗಮಿಸುತ್ತಿದ್ದಂತೆ ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಗೌರವದೊಂದಿಗೆ ಸ್ವಾಗತಿಸಲಾಯಿತು. ಅತಿಥಿಗಳು ವೇದಿಕೆಗೆ ಆಗಮಿಸಿದ ಬಳಿಕ ಕರ್ನಾಟಕ ಮೈಸೂರ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿತು. ಬಳಿಕ ಸ್ಕೌಟ್ಸ್ ಗೈಡ್ಸ್ ಪ್ರಾರ್ಥನೆ ಹಾಡಲಾಯಿತು.
ಉದ್ಘಾಟನಾ ಸಮಾರಂಭದ ಆರಂಭದಲ್ಲಿ ರಾಜ್ಯಪಾಲರೂ ಹಾಗೂ ಅತಿಥಿಗಳು ಆಗಮಿಸುತ್ತಿದ್ದಂತೆ ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಗೌರವದೊಂದಿಗೆ ಸ್ವಾಗತಿಸಲಾಯಿತು. ಅತಿಥಿಗಳು ವೇದಿಕೆಗೆ ಆಗಮಿಸಿದ ಬಳಿಕ ಕರ್ನಾಟಕ ಮೈಸೂರ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿತು. ಬಳಿಕ ಸ್ಕೌಟ್ಸ್ ಗೈಡ್ಸ್ ಪ್ರಾರ್ಥನೆ ಹಾಡಲಾಯಿತು.
ಬಳಿಕ ರಾಜ್ಯಪಾಲ ಥಾವರ್ ಚಂದ್ ದೀಪ ಬೆಳಗಿಸಿ 7 ದಿನಗಳ ವಿಶ್ವ ಜಾಂಬೂರಿಯನ್ನ ಉದ್ಘಾಟಿಸಿದರು. ನಂತರ ರಾಷ್ಟ್ರ ಬಾವುಟದೊಂದಿಗೆ ಸ್ಕೌಟ್ಸ್, ಗೈಡ್ಸ್, ರೇಂಜರ್ಸ್, ರೋವರ್ಸ್ ಪತಾಕೆಗಳನ್ನು ಅನಾವರಣಗೊಳಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ವಿಶ್ವ ಸ್ಕೌಟ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಲ್‌ಹೆಂದವಿ, ಸ್ಕೌಟ್ಸ್ ಗೈಡ್ಸ್ ಒಡಿಶಾ ಅಧ್ಯಕ್ಷ ಅಂತನು ಸಬ್ಯಸಾಚಿ ನಾಯಕ್, ಭಾರತೀಯ ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷ ಡಾ.ಅನಿಲ್ ಕುಮಾರ್ ಜೈನ್, ಏಷಿಯಾ ಫೆಸಿಫಿಕ್ ಪ್ರದೇಶದ ನಿರ್ದೇಶಕ ರಿಝಾಲ್ ಸಿ.ಪಂಗಿಲಿನಾನ್, ವಿಶ್ವ ಬಾಲಕಿಯರ ಸ್ಕೌಟ್ ಅಸೋಸಿಯೇಶನ್ ಅಧ್ಯಕ್ಷ ಚಂಪ ಮಾಲಿನಿ ಷಹಮಿಲ್, ಭಾರತೀಯ ಸ್ಕೌಟ್ಸ್ ಗೈಡ್ಸ್ ರಾಷ್ಟ್ರೀಯ ಕಮಿಷನ್ ಮುಖ್ಯಸ್ಥ ಡಾ.ಕೆ.ಕೆ.ಖಂದೇಲ್ ವಾಲಾ, ಶಾಸಕ ಉಮಾನಾಥ ಕೋಟ್ಯಾನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಡಾ. ಕುಮಾರ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಡಾ.ಎಂ.ಮೋಹನ ಆಳ್ವ ವಂದಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಶ್ರೀಲಂಕಾ ದೇಶದ ಸಾಂಪ್ರದಾಯಿಕ ವೇಷ ಭೂಷಣಗಳೊಂದಿಗೆ ದೇಶ, ರಾಜ್ಯ ಹಾಗೂ ಸ್ಥಳೀಯ 100ಕ್ಕೂ ಅಧಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಆಗಮಿಸಿ ವೇದಿಕೆಯಲ್ಲಿ ಪ್ರದರ್ಶನ ನೀಡಿದವು.
ಕರ್ನಾಟಕದ ಶ್ರೇಷ್ಠ ಕಲೆಗಳ ಪ್ರತಿಬಿಂಬ
ಅಂತರ್‌ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ಬೃಹತ್ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭದ ವೇದಿಕೆಯು ದ.ಕ. ಜಿಲ್ಲೆಯ ಯಕ್ಷಗಾನ, ಉತ್ತರ ಕರ್ನಾಟಕದ ವೀರಗಾಸೆ ಸೇರಿದಂತೆ ಕರ್ನಾಟಕದ ಕೆಲ ಪ್ರಸಿದ್ಧ ಕಲೆಗಳ ಸ್ಥಬ್ದ ಚಿತ್ರಗಳು ವೇದಿಕೆಯನ್ನು ಅಲಂಕರಿಸಿದ್ದವು.
50 ಸಾವಿರ ವಿದ್ಯಾರ್ಥಿಗಳು
ಏಳು ದಿನಗಳ ಕಾಲ ನಡೆಯುವ ಈ ಅಂತರ್‌ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ದೇಶ-ವಿದೇಶಗಳ 50 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್, ರೇಂಜರ್ಸ್ ಹಾಗೂ ದಳಪತಿಗಳು ಭಾಗವಹಿಸುತ್ತಿದ್ದಾರೆ. 10 ಸಾವಿರ ತರಬೇತುದಾರರು, 3 ಸಾವಿರ ಕಲಾವಿದರು ಭಾಗವಹಿಸುತ್ತಿದ್ದು, 3 ಸಾವಿರ ಸ್ವಯಂ ಸೇವಕರು ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವೇದಿಕೆಯ ಎದುರು ನೀಲಿ-ಬಿಳಿಯ ಸಾಗರ
ಸ್ಕೌಟ್ಸ್, ಗೈಡ್ಸ್, ರೇಂಜರ್ಸ್, ರೋವರ್ಸ್‌ಗಳ ನೀಲಿ, ಕಡು ನೀಲಿ, ತಿಳಿ ಬೂದು ಹಾಗೂ ಬಿಳಿ ಬಣ್ಣದ ಸಮವಸ್ತ್ರ ಧರಿಸಿದ್ದ ಸಹಸ್ರಾರು ಶಿಬಿರಾರ್ಥಿಗಳು ವೇದಿಕೆಯ ಎದುರು ಆಸನಗಳಲ್ಲಿ ಆಸೀನರಾಗಿದ್ದು, ಸಂಪೂರ್ಣ ಉದ್ಘಾಟನಾ ಮೈದಾನ ನೀಲ ಬಿಳಿಯ ಸಾಗರದಂತೆ ಕಂಗೊಳಿಸಿತು.
ಕಲಾ ವೈಭವದ ಮೆರವಣಿಗೆ
‘ಏಕ್ ಭಾರತ್ ಶ್ರೇಷ್ಠ ಭಾರತ್ ಕಲ್ಪನೆ’ಯನ್ನು ಸಾಕಾರಗೊಳಿಸುವ ಅಭೂತ ಪರ್ವ ಮೆರವಣಿಗೆಗೆ ಆಳ್ವಾಸ್‌ನ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಉದ್ಘಾಟನೆಗೊಂಡ ವಿಶ್ವ ಜಂಬೂರಿ ಸಾಕ್ಷಿಯಾಯಿತು. ಶಂಖ, ಜಾಗಟೆ, ಕೊಂಬು, ಕಹಳೆ ನಡುವೆ ಕೊರಗರ ಡೋಲು, ಸ್ಯಾಕ್ಸೋಫೋನ್ ಕಳೆಗಟ್ಟಿತು. ತಟ್ಟೀರಾಯ, ನಂದಿ ಧ್ವಜ, ಸೋಮನ ಕುಣಿತ, ಗೊರವರ ಕುಣಿತ, ಹುಲಿ ವೇಷ, ಪೂಜಾ ಕುಣಿತ, ವೀರಗಾಸೆ, ಕರಡಿ ಮಜಲು, ದಫ್ಪು, ಡೊಳ್ಳು ಕುಣಿತ, ತಿರುವಾದಿರ, ವಿವಿಧ ದೇಶಗಳ ಸಾಂಸ್ಕೃತಿಕ ಮಹತ್ವ ಸಾರುವ ಮುಖವಾಡಗಳು, ಕಥಕ್ಕಳಿ, ಶಿಂಗಾರಿ ಮೇಳಂ ಸೇರಿದಂತೆ ಸುಮಾರು 110ಕ್ಕೂ ಅಧಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಿಸ್ಟರ್ ಬೀನ್ ಗೊಂಬೆ ಹಾಗೂ ಬೃಹತ್ ಹುಲಿ, ಕರಡಿ ವೇಷದ ಗೊಂಬೆಗಳು ಗಮನ ಸೆಳೆದವು.