50 ಅಗ್ರ ಉದ್ದೇಶಪೂರ್ವಕ ಸುಸ್ತಿದಾರರಿಂದ ಬ್ಯಾಂಕುಗಳಿಗೆ 92,570 ಕೋ.ರೂ.ಬಾಕಿ : ಮೆಹುಲ್ ಚೋಕ್ಸಿ ನಂ.1

ಹೊಸದಿಲ್ಲಿ,ಡಿ.21: ಅಗ್ರ 50 ಉದ್ದೇಶಪೂರ್ವಕ ಸುಸ್ತಿದಾರರು 2022,ಮಾ.31ಕ್ಕೆ ಇದ್ದಂತೆ ಭಾರತೀಯ ಬ್ಯಾಂಕು(Indian Bank)ಗಳಿಗೆ ಒಟ್ಟು 92,570 ಕೋ.ರೂ.ಗಳನ್ನು ಬಾಕಿಯಿರಿಸಿದ್ದಾರೆ ಎಂದು ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ.
ದೇಶದಿಂದ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್ಸ್(Gitanjali Gems) 7,848 ಕೋ.ರೂ.ಗಳ ಸಾಲಬಾಕಿಯೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇರಾ ಇನ್‌ಫ್ರಾ(Ira infra) (5,879 ಕೋ.ರೂ.) ಮತ್ತು ರೀಗೊ ಆ್ಯಗ್ರೋ(Rego Agro) (4,803 ಕೋ.ರೂ.) ನಂತರದ ಸ್ಥಾನಗಳಲ್ಲಿವೆ ಎಂದು ಸಹಾಯಕ ವಿತ್ತಸಚಿವ ಭಾಗವತ್ ಕರಾಡ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು. ಆರ್‌ಬಿಐ ದತ್ತಾಂಶಗಳನ್ನು ಅವರು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. ಕಾನ್‌ಕಾಸ್ಟ್ ಸ್ಟೀಲ್ ಆ್ಯಂಡ್ ಪವರ್(Concast Steel and Power) (4,596 ಕೋ.ರೂ.),ಎಬಿಜಿ ಶಿಪ್‌ಯಾರ್ಡ್(ABG Shipyard) (3,708 ಕೋ.ರೂ.),ಫ್ರಾಸ್ಟ್ ಇಂಟರ್‌ನ್ಯಾಷನಲ್(Frost International) (3,311 ಕೋ.ರೂ.),ವಿನ್ಸಮ್ ಡೈಮಂಡ್ಸ್ ಆ್ಯಂಡ್ ಜ್ಯುವೆಲ್ಲರಿ(Winsome Diamonds and Jewellery) (2,931 ಕೋ.ರೂ.),ರೊಟೊಮ್ಯಾಕ್ ಗ್ಲೋಬಲ್(Rotomac Global) (2,893 ಕೋ.ರೂ.).ಕೋಸ್ಟಲ್ ಪ್ರಾಜೆಕ್ಟ್ಸ್(Coastal Projects) (2,311 ಕೋ.ರೂ.) ಮತ್ತು ಝೂಮ್ ಡೆವಲಪರ್ಸ್(Zoom Developers) (2,147 ಕೋ.ರೂ.)ನಂತಹ ಕಂಪನಿಗಳನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
8.9 ಲ.ಕೋ.ರೂ.ಗಳ ಉತ್ತುಂಗಕ್ಕೇರಿದ್ದ ಸರಕಾರಿ ಬ್ಯಾಂಕುಗಳ ಒಟ್ಟು ಅನುತ್ಪಾದಕ ಆಸ್ತಿಗಳು ಮೂರು ಲ.ಕೋ.ರೂ.ಗಳಷ್ಟು ಅಧಿಕ ಕಡಿಮೆಯಾಗಿದ್ದು,5.41 ಲ.ಕೋ.ರೂ.ಗಳಷ್ಟಿದೆ.
ಬ್ಯಾಂಕುಗಳು 10.1 ಲ.ಕೋ.ರೂ.ಗಳ ಸಾಲಗಳನ್ನು ರೈಟ್ ಆಫ್ (ಲೆಕ್ಕಪುಸ್ತಕಗಳಿಂದ ತೊಡೆದುಹಾಕುವುದು) ಮಾಡಿವೆ ಎಂದು ಕರಾಡ್ ತನ್ನ ಉತ್ತರದಲ್ಲಿ ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ಸರಕಾರಿ ಬ್ಯಾಂಕುಗಳ ಪೈಕಿ ಎಸ್‌ಬಿಐ (2 ಲ.ಕೋ.ರೂ.) ಅಗ್ರಸ್ಥಾನದಲ್ಲಿದ್ದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank)(67,214 ಕೋ.ರೂ.) ನಂತರದ ಸ್ಥಾನದಲ್ಲಿದೆ.
ಖಾಸಗಿ ಬ್ಯಾಂಕುಗಳ ಪೈಕಿ ಐಸಿಐಸಿಐ()ICICI) (50,514 ಕೋ.ರೂ.) ಅಗ್ರಸ್ಥಾನದಲ್ಲಿದ್ದರೆ ಎಚ್‌ಡಿಎಫ್‌ಸಿ(HDFC) (34,782 ಕೋ.ರೂ.) ನಂತರದ ಸ್ಥಾನದಲ್ಲಿದೆ.
ತನ್ನ ಉತ್ತರದಲ್ಲಿ ಸುಸ್ತಿದಾರರ ವಿರುದ್ಧ ಕ್ರಮಕ್ಕೆ ಸರಕಾರದ ಬದ್ಧತೆಯನ್ನು ಒತ್ತಿ ಹೇಳಿರುವ ಕರಾಡ್,ಸಾಲದ ಹಣವನ್ನು ವಸೂಲು ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಿಬಿಐ ಕಳೆದ ವಾರ ಪಿಎನ್‌ಬಿಯ ಡಿಜಿಎಂ ದೂರಿನ ಮೇರೆಗೆ ಚೋಕ್ಸಿ ವಿರುದ್ಧ ಮೂರು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದೆ. ಚೋಕ್ಸಿ ಪಿಎನ್‌ಬಿ ನೇತೃತ್ವದ ಮೂರು ಬ್ಯಾಂಕುಗಳ ಒಕ್ಕೂಟಕ್ಕೆ 6,746 ಕೋ.ರೂ.ಗಳನ್ನು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.







