ಕೆನಡಾ ಪ್ರಜೆಗಳಿಗೆ ಇ-ವೀಸಾ ವ್ಯವಸ್ಥೆ: ಭಾರತ

ಟೊರಂಟೊ, ಡಿ.21: ಈ ವರ್ಷದ ಮಾರ್ಚ್‌ನಲ್ಲಿ 150ಕ್ಕೂ ಅಧಿಕ ದೇಶಗಳಿಗೆ ಇ-ವೀಸಾ ವ್ಯವಸ್ಥೆ ಕಲ್ಪಿಸಿದ್ದ ಭಾರತ ಇದೀಗ ಕೆನಡಾ ಪ್ರಜೆಗಳಿಗೂ ಈ ಸೌಲಭ್ಯ ಒದಗಿಸಲಿದೆ ಎಂದು ಕೆನಡಾದ ಒಟ್ಟಾವದಲ್ಲಿನ ಭಾರತದ ಹೈಕಮಿಷನ್‌ನ ಹೇಳಿಕೆ ತಿಳಿಸಿದೆ.
ಮಂಗಳವಾರದಿಂದ ಅನ್ವಯಿಸುವಂತೆ, ಪ್ರವಾಸ, ವ್ಯಾಪಾರ, ವೈದ್ಯಕೀಯ ಅಥವಾ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡುವ ಕೆನಡಾ ಪ್ರಜೆಗಳು ವೀಸಾಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಕೆನಡಾದ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದ ಭಾರತೀಯ ಪ್ರಜೆಗಳು ವೀಸಾ ಪಡೆಯಲು ಸುಮಾರು 9 ತಿಂಗಳವರೆಗೆ ಕಾಯಬೇಕಿದ್ದ ಪರಿಸ್ಥಿತಿಯಿತ್ತು. ಇದಕ್ಕೆ ಪ್ರತಿಯಾಗಿ ಭಾರತವೂ ಕೆನಡಾ ಪ್ರಜೆಗಳಿಗೆ ಇ-ವೀಸಾ ಒದಗಿಸುವ ಕ್ರಮವನ್ನು ಮುಂದೂಡಿತ್ತು. ಇತ್ತೀಚಿನ ದಿನಗಳಲ್ಲಿ ಕೆನಡಾ ಆಡಳಿತ ಭಾರತೀಯರ ವೀಸಾಗಳ ತುರ್ತು ವಿಲೇವಾತಿಗೆ ಕ್ರಮ ಕೈಗೊಂಡು, ಹೆಚ್ಚಿನ ವಿಳಂಬವಿಲ್ಲದೆ ವೀಸಾ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಭಾರತವೂ ಕೆನಡಾ ಪ್ರಜೆಗಳಿಗೆ ಇ-ವೀಸಾ ವ್ಯವಸ್ಥೆ ಒದಗಿಸಿದೆ ಎಂದು ಭಾರತದ ಹೈಕಮಿಷನ್ ಹೇಳಿದೆ. ಇ-ವೀಸಾಕ್ಕೆ ಅರ್ಹತೆ ಗಳಿಸದ ಕೆನಡಿಯನ್ನರು, ಬಿಎಲ್‌ಎಸ್ ನಿರ್ವಹಿಸುವ 9 ಕೇಂದ್ರಗಳಲ್ಲಿ ಪೇಪರ್ ದಾಖಲೆಗಾಗಿ ಅರ್ಜಿ ಸಲ್ಲಿಸಬಹುದು . ಇದುವರೆಗೆ ಭಾರತದ ವೀಸಾ ಪಡೆಯಬೇಕಿದ್ದರೆ ಅರ್ಜಿದಾರರು ಮುಂಗಡ ಭೇಟಿಯನ್ನು ಮೊದಲೇ ಗೊತ್ತುಪಡಿಸಿದ ಬಳಿಕ ವೀಸಾ ಕೇಂದ್ರಗಳಿಗೆ ಹೋಗಬೇಕಿತ್ತು. ಈಗಾಗಲೇ ಪೇಪರ್ ದಾಖಲೆಯ ಮೂಲಕ ಸಲ್ಲಿಸಿರುವ ವೀಸಾ ಅರ್ಜಿಯನ್ನು ಆದ್ಯತೆಯ ಮೇರೆಗೆ ಗಮನಿಸಲಾಗುವುದು. ಅಲ್ಲದೆ ಈ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಹಿಂಪಡೆದು ಇ-ವೀಸಾ ಅರ್ಜಿ ಸಲ್ಲಿಸುವ ಅವಕಾಶವೂ ಇದೆ ಅಧಿಕಾರಿಗಳು ಹೇಳಿದ್ದಾರೆ.
ನವೆಂಬರ್ ಅಂತ್ಯಕ್ಕೆ ಸುಮಾರು 4.8 ದಶಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಬಹುತೇಕ ದುಪ್ಪಟ್ಟಾಗಿದೆ ಎಂದು ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಕೇಂದ್ರದ ಹೇಳಿಕೆ ತಿಳಿಸಿದೆ.