ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಅವೈಜ್ಞಾನಿಕ: ಸುಮಲತಾ ಅಂಬರೀಷ್ ಆರೋಪ

ನವದೆಹಲಿ, ಡಿ.20: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿದೆ ಮತ್ತು ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha) ಅವರು ಆರೋಪಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ''ಮೈಸೂರು ಮತ್ತು ಬೆಂಗಳೂರು ನಡುವಿನ ಪ್ರಯಾಣದ ಅವಧಿ ಕಡಿತ ಮಾಡುವ ಉದ್ದೇಶದಿಂದ ಈ ಕಾಮಗಾರಿ ನಡೆಸಲಾಗುತ್ತಿದೆ. ಮಂಡ್ಯ ಕ್ಷೇತ್ರದ ಮೂಲಕ ಈ ಯೋಜನೆ ಹಾದು ಹೋಗುತ್ತದೆ. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಾಕಷ್ಟು ಅನಾಹುತ ಸಂಭವಿಸಿದೆ'' ಎಂದರು.
''ರಸ್ತೆಗೆ ಹಾಕಲಾಗಿದ್ದ ಡಾಂಬರಿಕರಣ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಗುಣಮಟ್ಟದ ರಸ್ತೆ ನಿರ್ಮಿಸಿಲ್ಲ. ಅವೈಜ್ಷಾನಿಕ ವಿಧಾನ ಅಳವಡಿಸಲಾಗಿದೆ. ರಸ್ತೆ ಬದಿ ಚರಂಡಿಗಳ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಲಾಗಿದೆ. ಇದರಿಂದ ರೈತರ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
------------------------------------------
''ರಾಷ್ಟ್ರೀಯ ಹೆದ್ದಾರಿ-275, 6 ಪಥದ ಬೆಂಗಳೂರು-ಮೈಸೂರು ರಸ್ತೆಯ ಅಭಿವೃದ್ಧಿ ಕಾಮಗಾರಿಯಲ್ಲಿ ಮಂಡ್ಯ ಜಿಲ್ಲೆಯ ಗಡಿ ಭಾಗವಾದ ನಿಡಘಟ್ಟದ ಬಳಿ ಹೆದ್ದಾರಿಗೆ ಆಗಮನ-ನಿರ್ಗಮನ ಸಂಪರ್ಕ ವ್ಯವಸ್ಥೆಯಲ್ಲಿ ಸಮರ್ಪಕ ಕ್ರಮವಾಗಿಲ್ಲ. ಮದ್ದೂರು ಪಟ್ಟಣಕ್ಕೆ ಚನ್ನಪಟ್ಟಣ ತಾಲೂಕಿನ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದೆ. ಇದು ಸರ್ಕಾರದ ಸರಿಯಾದ ಕ್ರಮವಲ್ಲ. ಕೂಡಲೇ ಇದರ ಬಗ್ಗೆ ಬಹಿರಂಗ ಚರ್ಚೆ ಆಗಬೇಕು''
- ದಿನೇಶ್ ಗೂಳಿಗೌಡ , ವಿಧಾನ ಪರಿಷತ್ ಸದಸ್ಯರು







