ಬಿಡಾಡಿ ದನಗಳನ್ನು ಶಾಲೆಯಲ್ಲಿ ಕೂಡಿ ಹಾಕಿ, ತರಗತಿಗಳು ನಡೆಯದಂತೆ ಮಾಡಿದ ಉತ್ತರ ಪ್ರದೇಶ ಗ್ರಾಮಸ್ಥರು
ತರಗತಿಗಳನ್ನು ಅಮಾನತುಗೊಳಿಸಿ ಶಾಲೆಗೆ ರಜೆ ಘೋಷಣೆ

ಬಿಜ್ನೋರ್: ಬಿಡಾಡಿ ದನಗಳ ಉಪಟಳದಿಂದ ಕುಪಿತಗೊಂಡ ಗ್ರಾಮಸ್ಥರು, ಸರ್ಕಾರಿ ಪ್ರಾಥಮಿಕ ಶಾಲೆಯ ಬೀಗ ಒಡೆದು, ಶಾಲೆಯ ಆವರಣದಲ್ಲಿ 80ಕ್ಕೂ ಹೆಚ್ಚು ಬಿಡಾಡಿ ದನಗಳನ್ನು ಕೂಡಿ ಹಾಕಿರುವ ಘಟನೆ ಬಿಜ್ನೋರ್ ಜಿಲ್ಲೆಯ ಕೊತ್ವಾಲಿ ದೇಹತ್ ಬ್ಲಾಕ್‌ನ ಬಂಕಾಪುರ್ ಗ್ರಾಮದಿಂದ ಬುಧವಾರ ವರದಿಯಾಗಿದೆ. ಇದರಿಂದ ತಾತ್ಕಾಲಿಕವಾಗಿ ತರಗತಿಗಳನ್ನು ಅಮಾನತುಗೊಳಿಸಿ, ಶಾಲೆಗೆ ರಜೆ ಘೋಷಿಸಲಾಗಿದೆ.
ಶಾಲೆಯ ಆವರಣವನ್ನು ದನಗಳು ಆಕ್ರಮಿಸಿಕೊಂಡಿದ್ದುದರಿಂದ 65ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಗೆ ಪ್ರವೇಶಿಸದಂತೆ ತಡೆಯಲಾಗಿದೆ ಮತ್ತು ಅವರನ್ನು ಬಲವಂತವಾಗಿ ಮನೆಗೆ ವಾಪಸ್ ಕಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮಸ್ಥರು, ಬಿಡಾಡಿ ದನಗಳು ನಮ್ಮ ಬೆಳೆಗಳನ್ನು ಹಾಳುಗೆಡವುತ್ತಿವೆ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಪದೇ ಪದೇ ದೂರು ನೀಡಿದರೂ, ಅವರು ನಮ್ಮ ಸಮಸ್ಯೆಯೆಡೆಗೆ ಗಮನ ನೀಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಿಡಾಡಿ ದನಗಳನ್ನು ಶಾಲೆಗೆ ತುಂಬುವ ಕಠಿಣ ಕ್ರಮ ಕೈಗೊಳ್ಳಬೇಕಾಯಿತು ಎಂದು ಆರೋಪಿಸಿದ್ದಾರೆ.
"ನಾನು ಬುಧವಾರ ಬೆಳಗ್ಗೆ ಶಾಲೆಗೆ ಆಗಮಿಸಿದಾಗ ಶಾಲೆಯ ಸುತ್ತಮುತ್ತಲೆಲ್ಲ ಗದ್ದಲವುಂಟಾಗಿತ್ತು. ಶಾಲೆಯ ಆವರಣದಲ್ಲಿ ದೊಡ್ಡ ಸಂಖ್ಯೆಯ ದನಗಳನ್ನು ಕೂಡಿ ಹಾಕಿರುವುದನ್ನು ಕಂಡು ನಾನು ಆಘಾತಗೊಂಡೆ. ಇದರಿಂದ ತರಗತಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದು, ಈ ವಿಷಯವನ್ನು ನನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ" ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಬಬಿತಾ ದೇವಿ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜ್ನೋರ್ ಉಪ ವಿಭಾಗಾಧಿಕಾರಿ ಮೋಹಿತ್ ಕುಮಾರ್ ಹಾಗೂ ವೃತ್ತಾಧಿಕಾರಿ ಅನಿಲ್ ಕುಮಾರ್ ರೈತರೊಂದಿಗೆ ಮಾತುಕತೆ ನಡೆಸಿ, ದನಗಳನ್ನು ಗೋಶಾಲೆಗೆ ರವಾನಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಹೆಸರೇಳಲಿಚ್ಛಿಸದ ಗ್ರಾಮಸ್ಥರೊಬ್ಬರು, "ನಾವು ಈ ಕುರಿತು ಪಶು ಸಂಗೋಪನೆ ಮತ್ತು ಕಂದಾಯ ಇಲಾಖೆಗಳ ಗಮನಕ್ಕೆ ತಂದಿದ್ದೆವು. ಆದರೆ, ಅಧಿಕಾರಿಗಳು ನಮ್ಮ ಸಮಸ್ಯೆಗೆ ಕಿವುಡಾಗಿದ್ದರು. ಅವರ ಸಂವೇದನಾರಹಿತ ನಡವಳಿಕೆಯು ನಮ್ಮನ್ನು ಶಾಲೆಯಲ್ಲಿ ದನಗಳನ್ನು ಕೂಡಿ ಹಾಕುವಂಥ ಪರಿಸ್ಥಿತಿಗೆ ದೂಡಿತು" ಎಂದು ಹೇಳಿದ್ದಾರೆ.
"ನಾವು ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು" ಎಂದು ಉಪ ವಿಭಾಗಾಧಿಕಾರಿ ಮೋಹಿತ್ ಕುಮಾರ್ ತಿಳಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.







