ತಿ.ನರಸೀಪುರ | ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ, ನಿಟ್ಟುಸಿರುಬಿಟ್ಟ ಗ್ರಾಮಸ್ಥರು
ತಿ. ನರಸೀಪುರ (ಮೈಸೂರು) ,ಡಿ.22: ಇಬ್ಬರನ್ನು ಸಾಯಿಸಿ, ಹಲವರ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಗಳ ಪೈಕಿ ಒಂದು ಚಿರತೆ ಕೊನೆಗೂ ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಯ ನಂತರ ಬೋನಿಗೆ ಬಿದ್ದಿದೆ.
ತಾಲೂಕಿನ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಈ ಚಿರತೆ ಸೆರೆ ಸಿಕ್ಕಿದ್ದು, ಕಳೆದ ಹಲವು ದಿನಗಳಿಂದಲೂ ಗ್ರಾಮದ ಸುತ್ತಲು ಚಿರತೆ ಓಡಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯು ಈ ಭಾಗದಲ್ಲಿ ಚಿರತೆ ಬಂಧನಕ್ಕೆ ಬೋನು ಇರಿಸಿದ್ದರು.
ಬುಧವಾರರಾತ್ರಿ 8 ಗಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಬಂಧನಕ್ಕೆ ಬೋನಿನಲ್ಲಿ ಕೋಳಿಯನ್ನು ಇರಿಸಿದ್ದು, ಕೋಳಿ ತಿನ್ನಲು ಬಂದ ಚಿರತೆ ಸೆರೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲಿ ಇನ್ನೂ ಎರಡು ಚರತೆಗಳು ಓಡಾಡುತ್ತಿವೆ ಎನ್ನಲಾಗಿದೆ.
ಎರಡೂವರೆ ವರ್ಷದ ಈ ಚಿರತೆಯು ಮುತ್ತತ್ತಿ ಗ್ರಾಮದ ಭಾಗದಲ್ಲಿ ಬೋನಿಗೆ ಬಿದ್ದಿದ್ದು, ಗ್ರಾಮದ ಜನತೆ ನೀಡಿದ ಮಾಹಿತಿ ಮೇರೆಗೆ ತೋಟವೊಂದರಲ್ಲಿ ಬೋನು ಇರಿಸಲಾಗಿದ್ದರಿಂದ ಚಿರತೆ ಸೆರೆ ಸಿಕ್ಕಿದೆ. ಮೇಲಧಿಕಾರಿಗಳ ಸಮ್ಮುಖದಲ್ಲಿ ವೈದ್ಯಕೀಯ ತಪಾಸಣೆ ನಂತರ ಚಿರತೆಯನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ರವಾನಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.