ಅಲ್ಪಸಂಖ್ಯಾತರ ಮೀಸಲಾತಿ ತೆಗೆದು ಪಂಚಮಸಾಲಿ ಸಮುದಾಯಕ್ಕೆ ನೀಡಲು RSS ಸೂಚನೆ ನೀಡಿದೆ: ಎಂ.ಲಕ್ಷ್ಮಣ್ ಆರೋಪ
''ಜನವರಿ ತಿಂಗಳಿನಲ್ಲಿ ಕಾಂಗ್ರೆಸ್ ಮುಖಂಡರ ಮೇಲೆ ಐಟಿ, ಈಡಿಯಿಂದ ದಾಳಿ ಮಾಡುವ ಹುನ್ನಾರ ನಡೆಯುತ್ತಿವೆ''
![ಅಲ್ಪಸಂಖ್ಯಾತರ ಮೀಸಲಾತಿ ತೆಗೆದು ಪಂಚಮಸಾಲಿ ಸಮುದಾಯಕ್ಕೆ ನೀಡಲು RSS ಸೂಚನೆ ನೀಡಿದೆ: ಎಂ.ಲಕ್ಷ್ಮಣ್ ಆರೋಪ ಅಲ್ಪಸಂಖ್ಯಾತರ ಮೀಸಲಾತಿ ತೆಗೆದು ಪಂಚಮಸಾಲಿ ಸಮುದಾಯಕ್ಕೆ ನೀಡಲು RSS ಸೂಚನೆ ನೀಡಿದೆ: ಎಂ.ಲಕ್ಷ್ಮಣ್ ಆರೋಪ](https://www.varthabharati.in/sites/default/files/images/articles/2022/12/22/360943-1671729350.jpg)
ಬೆಂಗಳೂರು, ಡಿ.22: 'ಪಂಚಮಸಾಲಿ ಮೀಸಲಾತಿ ನೀಡುವ ವಿಚಾರದಲ್ಲಿ ಅವರು ನೂರಕ್ಕೆ ನೂರು ಮೀಸಲಾತಿ ನೀಡುತ್ತಾರೆ. ಅದು ಹೇಗೆ ಎಂದರೆ ಅಲ್ಪಸಂಖ್ಯಾತ ಸಮುದಾಯದ ಶೇ.4ರಷ್ಟು ಮೀಸಲಾತಿಯನ್ನು ಶೇ.2ಕ್ಕೆ ಇಳಿಸಿ, ಉಳಿದ ಶೇ.2ರಷ್ಟು ಮೀಸಲಾತಿಯನ್ನು ಪಂಚಮಸಾಲಿ ಅವರಿಗೆ ನೀಡುತ್ತಾರೆ. ಈ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಹಾಗೂ ಆರೆಸ್ಸೆಸ್ಸ್ ಸೂಚನೆ ನೀಡಿ ಆಗಿದೆ' ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಈ ಸಂದರ್ಭದಲ್ಲಿ ಪಂಚಮಸಾಲಿ ಲಿಂಗಾಯತರಲ್ಲಿ ಒಂದು ಮನವಿ ಮಾಡುತ್ತೇನೆ. ನಿಮ್ಮ ಬೇಡಿಕೆ ನ್ಯಾಯಸಮ್ಮತವಾಗಿದೆ. ತಳ ಸಮುದಾಯದವರಿಗೆ ಮೀಸಲಾತಿ ನೀಡಿ ಅವರನ್ನು ಮೇಲೆತ್ತುವ ಬಗ್ಗೆ ನಾವು ಬೆಂಬಲಿಸುತ್ತೇವೆ.ಆದರೆ ಬೇರೆಯವರ ಹಕ್ಕನ್ನು ಕಿತ್ತು ನಿಮಗೆ ಕೊಡುವುದನ್ನು ಒಪ್ಪಬೇಡಿ ಎಂದು ತಿಳಿಸಿದರು.
ಬರುವ ಜನವರಿ ತಿಂಗಳಿನಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ಮನೆ, ಕಚೇರಿ, ಸಂಸ್ಥೆಗಳ ಮೇಲೆ ಸಿಬಿಐ, ಐಟಿ ಹಾಗೂ ಈ.ಡಿ ಸಂಸ್ಥೆಗಳಿಂದ ದಾಳಿ ಮಾಡುವ ಸಂಚು ನಡೆಯುತ್ತಿವೆ ಎಂದು ಆರೋಪಿಸಿದರು.
ಕೇಂದ್ರ ಸರಕಾರವು ಒಂಬತ್ತು ವರ್ಷಗಳಿಂದ ಸಿಬಿಐ, ಐಟಿ ಹಾಗೂ ಈ.ಡಿ ಸಂಸ್ಥೆಗಳನ್ನು ದ್ವೇಷದ ರಾಜಕಾರಣಕ್ಕಾಗಿ ಬಳಸಿಕೊಳ್ಳತ್ತಿದೆ. ಇತ್ತೀಚೆಗೆ ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಅದನ್ನೇ ಮಾಡಿದ್ದಾರೆ. ಈ ಎರಡು ರಾಜ್ಯಗಳಲ್ಲಿ 25 ದಿನಗಳ ಅವಧಿಯಲ್ಲಿ 107 ದಾಳಿಗಳು ನಡೆದಿವೆ. ಚುನಾವಣಾ ಫಲಿತಾಂಶ ಬಂದ ನಂತರ ಯಾವುದೇ ದಾಳಿ ನಡೆದಿಲ್ಲ. ಇದೇ ಸೂತ್ರವನ್ನು ರಾಜ್ಯದಲ್ಲಿ ಜನವರಿ ಮೊದಲ ವಾರದಿಂದ ಆರಂಭಿಸಲಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ ಅವರ ಮೇಲೆ 17 ಬಾರಿ ಐಟಿ ಮತ್ತು ಈ.ಡಿ ದಾಳಿ ನಡೆಸಿದ್ದು, ಅಧಿಕಾರಿಗಳು 35 ಬಾರಿ ನೊಟೀಸ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಿವಕುಮಾರ್ ಅವರ ಮೇಲೆ ನಿರಂತರವಾಗಿ ದಾಳಿ ನಡೆಯಲಿದೆ. ಈಡಿ ದಾಳಿ ಪ್ರಕಾರ ಇದುವರೆಗೂ ಈ ಸಂಸ್ಥೆಯಲ್ಲಿ 5400 ಪ್ರಕರಣ ದಾಖಲಾಗಿದ್ದು, ಇದುವರೆಗೂ ಕೇವಲ 23 ಅಪರಾಧಿಗಳನ್ನು ದೋಷಿಗಳು ಘೋಷಣೆ ಮಾಡಿದ್ದಾರೆ ಎಂದರು.
ಅಧಿಕಾರಿಗಳು ಅಧಿಕೃತವಾಗಿ ಎಲ್ಲಿಯೂ ಮಾಹಿತಿ ನೀಡುವುದಿಲ್ಲ. ಆದರೂ ಮೂಲಗಳ ಮಾಹಿತಿ ಎಂಬ ಹೆಸರಲ್ಲಿ ಏನೂ ಇಲ್ಲದಿದ್ದರೂ ಅವರು ಮಾಧ್ಯಮಗಳ ಸುಳ್ಳು ಸುದ್ದಿ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಬಹಳ ಪ್ರಮುಖ ದಾಖಲೆ ವಶಪಡಿಸಿಕೊಂಡಿದ್ದಾರೆ ಎಂದ ಅವರು, ನನ್ನ ಮಾಹಿತಿ ಪ್ರಕಾರ ಇವರು ಕೆಲವು ಸ್ವಾಮೀಜಿಗಳಿಗೂ ಬ್ಲಾಕ್ ಮೇಲೆ ಮಾಡುತ್ತಿದ್ದಾರೆ. ಅವರನ್ನು ತಮ್ಮ ಕಡೆ ಸೆಳೆದು ಬಿಜೆಪಿ ಪರ ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಬಲ ಸಮುದಾಯದ ಸ್ವಾಮೀಜಿಗಳ ಮೇಲೆ ಪ್ರಯೋಗ ನಡೆದಿದೆ ಎಂದು ಆರೋಪಿಸಿದರು.