ಕೋವಿಡ್-19: ಮಾಸ್ಕ್ ಧರಿಸುವಂತೆ, ವಿದೇಶ ಪ್ರಯಾಣ ಮಾಡದಂತೆ ನಾಗರಿಕರಿಗೆ ಭಾರತೀಯ ವೈದ್ಯರ ಸಂಘ ಸಲಹೆ

ಹೊಸದಿಲ್ಲಿ,ಡಿ.22: ನೆರೆಯ ಚೀನಾ(China) ಮತ್ತು ಇತರ ಕೆಲವು ದೇಶಗಳಲ್ಲಿ ಕೊರೋನ ವೈರಸ್(Corona virus) ಸೋಂಕಿನ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ನಡುವೆಯೇ ಭಾರತೀಯ ವೈದ್ಯರ ಸಂಘ (IMA)ವು,ಕೋವಿಡ್ ಸೂಕ್ತ ನಡವಳಿಕೆಗಳನ್ನು ಅನುಸರಿಸುವಂತೆ ದೇಶದ ಜನರನ್ನು ಆಗ್ರಹಿಸಿದೆ.
ಕೋವಿಡ್ ಸೋಂಕು ಮತ್ತೆ ಹಾವಳಿಯಿಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ,ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ,ದೈಹಿಕ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಂತೆ,ಸ್ಯಾನಿಟೈಸರ್‌ಗಳನ್ನು ಬಳಸುವಂತೆ ಮತ್ತು ಸೋಪಿನಿಂದ ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳುವಂತೆ ಐಎಂಎ ಸೂಚಿಸಿದೆ.
ಲಭ್ಯ ವರದಿಗಳಂತೆ ಕಳೆದ 24 ಗಂಟೆಗಳಲ್ಲಿ ಅಮೆರಿಕ,ಜಪಾನ,ದ.ಕೊರಿಯಾ,ಫ್ರಾನ್ಸ್ ಮತ್ತು ಬ್ರಾಝಿಲ್‌ನಂತಹ ಪ್ರಮುಖ ದೇಶಗಳಲ್ಲಿ ಸುಮಾರು 5.37 ಲ.ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಭಾರತದಲ್ಲಿ 145 ಹೊಸ ಪ್ರಕರಣಗಳು ವರದಿಯಾಗಿದ್ದು,ಈ ಪೈಕಿ ನಾಲ್ಕು ಪ್ರಕರಣಗಳು ಚೀನಾದ ನೂತನ ಬಿಎಫ್.7 ಪ್ರಭೇದದ್ದಾಗಿವೆ ಎಂದು ಐಎಂಎ ತಿಳಿಸಿದೆ.
ಮದುವೆಗಳು,ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಂತಹ ಸಾರ್ವಜನಿಕ ಸಮಾವೇಶಗಳಿಂದ ದೂರವಿರುವಂತೆ ಮತ್ತು ವಿದೇಶ ಪ್ರಯಾಣಗಳನ್ನು ಕೈಗೊಳ್ಳದಂತೆ ನಾಗರಿಕರಿಗೆ ಸೂಚಿಸಿರುವ ಐಎಂಎ,ಜ್ವರ,ಗಂಟಲು ಕೆರೆತ,ಕೆಮ್ಮು,ಬೇಧಿ ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವಂತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಸಾಧ್ಯವಿದ್ದಷ್ಟು ಶೀಘ್ರ ಕೋವಿಡ್ ಲಸಿಕೆ ಡೋಸ್‌ಗಳನ್ನು ಪಡೆಯುವಂತೆ ಆಗ್ರಹಿಸಿದೆ. ಕಳೆದ ವರ್ಷ ದೇಶವನ್ನು ಅಪ್ಪಳಿಸಿದ್ದ ಕೊರೊನವೈರಸ್‌ನ ವಿನಾಶಕಾರಿ ಎರಡನೇ ಅಲೆಯ ಪುನರಾವರ್ತನೆಯನ್ನು ತಪ್ಪಿಸಲು ತುರ್ತು ಔಷಧಿಗಳು,ಆಮ್ಲಜನಕ ಪೂರೈಕೆ ಮತ್ತು ಆ್ಯಂಬುಲನ್ಸ್ ಸೇವೆಗಳನ್ನು ಲಭ್ಯವಾಗಿಸಲು ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನಿರ್ದೇಶಿಸುವ ಮೂಲಕ ಸನ್ನದ್ಧತೆಯನ್ನು ಹೆಚ್ಚಿಸುವಂತೆ ಅದು ಸರಕಾರಕ್ಕೆ ಸಲಹೆ ನೀಡಿದೆ.
ಸದ್ಯದ ಮಟ್ಟಿಗೆ ಪರಿಸ್ಥಿತಿಯು ಆತಂಕಕಾರಿಯಾಗಿಲ್ಲ,ಹೀಗಾಗಿ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದಿರುವ ಐಎಂಎ,ಚಿಕಿತ್ಸೆಗಿಂತ ತಡೆಗಟ್ಟುವಿಕೆಯು ಉತ್ತಮ ಎಂದು ಹೇಳಿದೆ.







