ಜಾಂಬೂರಿಯ ವೈಭವಕ್ಕೆ ಮೆರಗು ತಂದ ಖ್ಯಾತ ಗಾಯಕ ಶಂಕರ್ ಮಹಾದೇವನ್ ಬಳಗದ ಸಂಗೀತ ರಸಮಂಜರಿ ಕಾರ್ಯಕ್ರಮ

ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಜಾಂಬೂರಿಯ ವೈಭವಕ್ಕೆ ಎರಡನೆ ದಿನವಾದ ಗುರುವಾರ ಸಂಗೀತ ರಸಮಂಜರಿ ಕಾರ್ಯಕ್ರಮ ವಿಶಿಷ್ಟ ಮೆರಗು ನೀಡಿತು.
ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಮುಂಬೈಯ ಶಂಕರ್ ಮಹಾದೇವನ್ ಮತ್ತು ಬಳಗ ಸತತ 2 ಗಂಟೆ ಕಾಲ ನೀಡಿದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿಯ ಬಿರುಸಿನ ಚಪ್ಪಾಳೆಯ ಸದ್ದು ಪ್ರೇಕ್ಷಕರಿಗೆ ಮುದ ನೀಡಿತು. ಕನ್ನಡ, ಹಿಂದಿ, ತಮಿಳು ಸಹಿತ ಹಲವು ಭಾಷೆಗಳ ಹಾಡು ಸಂಗೀತ ಪ್ರಿಯರಿಗೆ ರಸದೌತಣವನ್ನು ನೀಡಿತು.
ಪ್ರೇಕ್ಷಕರನ್ನು ಭಾವನಾತ್ಮಕ ಲೋಕಕ್ಕೆ ಕೊಂಡೊಯ್ದ ಟ್ರಿಬ್ಯುಟ್ ಟು ಪುನೀತ್, ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಕಲ್ ಹೋ ನ ಹೋ ಗಾಯನದ ಮೂಲಕ ಗೌರವ ಸಲ್ಲಿಸಲಾಯಿತು.
ಮೌನ ಆವರಿಸಿದ ವೇದಿಕೆಗೆ ಮತ್ತದೆ ಕಳೆ ತಂದಿದ್ದು, ಹಿಂದೂಸ್ತಾನಿ ಹಾಡು. ಅತ್ಯಂತ ಸೊಗಸಾಗಿ ಹಾಡುತ್ತಿದ್ದಾಗಲೇ ವಿದ್ಯಾರ್ಥಿಗಳು ‘ಇಂಡಿಯಾ ಇಂಡಿಯಾ’ ಎಂದು ಕೇಕೆ ಹಾಕುತ್ತಿರುವುದು ಕಂಡು ಬಂತು.