ಉಡುಪಿ: ರೆಡ್‌ಕ್ರಾಸ್‌ನಿಂದ ಅಂತರ್‌ರಾಜ್ಯ ಯುವ ವಿನಿಮಯ ಕಾರ್ಯಕ್ರಮ

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಕರ್ನಾಟಕ ಶಾಖೆ ಹಾಗೂ ಓಡಿಸ್ಸಾ ರಾಜ್ಯದ ಜಹಾಜ್‌ಪುರ ಜಿಲ್ಲೆಯ ಮಹಾಪುರುಷ ಹಾಡಿದಾಸ್ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಯುವ ರೆಡ್‌ಕ್ರಾಸ್ ಕಾರ್ಯ ಚಟುವಟಿಕೆಗಳ ಅಡಿಯಲ್ಲಿ ಅಂತರ್‌ರಾಜ್ಯ ಯುವ ವಿನಿಮಯ ಕಾರ್ಯಕ್ರಮ ಇಂದು ಅಜ್ಜರಕಾಡು ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ನಡೆಯಿತು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾಘಟಕದ ಇತಿಹಾಸ, ರೆಡ್‌ಕ್ರಾಸ್ ಕಾರ್ಯ ಚಟುವಟಿಕೆಗಳಾದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಪ್ರಥಮ ಚಿಕಿತ್ಸಾ ತರಬೇತಿ, ಪತ್ತು ನಿರ್ವಹಣೆ, ನೆರೆ ಪರಿಹಾರ ಸಾಮಾಗ್ರಿಗಳ ವಿತರಣೆ, ಕೋವಿಡ್ ಸಮಯದಲ್ಲಿ ಮಾಸ್ಕ್, ಸ್ಯಾನಿಟೈಸರ್ ಮತ್ತುಗ್ಲೌವ್ಸ್ ವಿತರಣೆ ಸೇರಿದಂತೆ ಘಟಕದ ಸೇವಾಕಾರ್ಯಗಳು ಹಾಗೂ ಮುಂದಿನ ರೆಡ್‌ಕ್ರಾಸ್ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಓಡಿಶಾ ಮಹಾಪುರುಷ ಹಾಡಿದಾಸ್ ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್ ಕೌನ್ಸಿಲರ್‌ಗಳಾದ ಡಾ.ನಿರಂಜನ್ ಪಾತ್ರಾ, ಡಾ.ಆದಿತ್ಯ ಮಿಶ್ರಾ ಹಾಗೂ ಪ್ರೊ.ಅಮಿತ್ ಬಾಲಾ ಮೊಹಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಹಾಜ್‌ಪುರ ಜಿಲ್ಲೆಯ ಯುವ ರೆಡ್‌ಕ್ರಾಸ್‌ನ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ರೆಡ್‌ಕ್ರಾಸ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕ್ಲಿನಿಕಲ್ ಸೈಕಾಲಜಿಸ್ಟ್ ವೈಶಾಖ್ ವಾರಂಬಳ್ಳಿ, ರೆಡ್‌ಕ್ರಾಸ್ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸದಸ್ಯ ಟಿ. ಚಂದ್ರಶೇಖರ್ ಸ್ವಾಗತಿಸಿ, ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ರತ್ನಾಕರ ಶೆಟ್ಟಿ ವಂದಿಸಿದರು.